ಸಚಿವಾಲಯ ಪಾಸ್ ಅಂಟಿಸಿಕೊಳ್ಳಲು ಶಾಸಕರಿಗೆ ಸೂಚನೆ

Update: 2018-09-18 13:38 GMT

ಬೆಂಗಳೂರು, ಸೆ. 18: ಶಾಸಕರು ಹೆದ್ದಾರಿಗಳ ಟೋಲ್‌ಗಳಲ್ಲಿ ಪ್ರಯಾಣಿಸಲು ವಿಧಾನಸಭಾ ಸಚಿವಾಲಯ ನೀಡಿರುವ ವಾಹನ ಪಾಸ್‌ಗಳನ್ನು ಕಡ್ಡಾಯವಾಗಿ ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುವುದು ಸೂಕ್ತ ಎಂದು ಸ್ಪೀಕರ್ ರಮೇಶ್‌ ಕುಮಾರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ಮಾಡಿದ್ದಾರೆ.

ಈ ಸಂಬಂಧ ಶಾಸಕರು ಜಂಟಿ ಪತ್ರ ಬರೆದಿದ್ದು, ಹೆದ್ದಾರಿಗಳಲ್ಲಿರುವ ಟೋಲ್ಗಳಲ್ಲಿ ಶಾಸಕರು, ಮಾಜಿ ಶಾಸಕರೆಂದು ಹೇಳಿಕೊಂಡು ಟೋಲ್ ಶುಲ್ಕ ಪಾವತಿಸದೆ ಅಲ್ಲಿನ ಸಿಬ್ಬಂದಿಗಳ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮೇಲ್ಕಂಡ ಸೂಚನೆ ನೀಡಿದ್ದಾರೆ.

ಸಚಿವಾಲಯ ನೀಡಿದ ವಾಹನಗಳ ಪಾಸ್‌ಗಳನ್ನು ವಾಹನದಲ್ಲಿ ಅಂಟಿಸಿದಾಗಲೂ ಟೋಲ್ಗಳಲ್ಲಿ ಮನ್ನಣೆ ನೀಡದಿದ್ದಲ್ಲಿ ಅಥವಾ ಸಹಕರಿಸದಿದ್ದಲ್ಲಿ ಕೂಡಲೇ ಸಚಿವಾಲಯದ ಗಮನಕ್ಕೆ ತನ್ನಿ. ಅಭಿವೃದ್ಧಿಗಾಗಿ ಸಹಕರಿಸಲು ಮುಂದೆ ಬಂದಿರುವ ಟೋಲ್ ಕಂಪೆನಿಗಳಾಗಲಿ ಅಥವಾ ಶಾಸಕರು, ಮಾಜಿ ಶಾಸಕರಿಗೆ ಯಾವುದೇ ರೀತಿಯಲ್ಲಿ ಮುಜುಗರವಾಗಬಾರದು ಎಂದು ಹೇಳಿದ್ದಾರೆ.

ರಾಜ್ಯದ ಉಭಯ ಸದನಗಳ ಸದಸ್ಯರು, ಮಾಜಿ ಸದಸ್ಯರ ಗೌರವ ಮತ್ತು ಹಿತ ಕಾಪಾಡುವ ದೃಷ್ಟಿಯಿಂದ ಪ್ರಯಾಣ ಮಾಡುವ ಸಂದರ್ಭದಲ್ಲಿ ಸಚಿವಾಲಯದಿಂದ ವಿತರಿಸಲಾಗಿರುವ ವಾಹನ ಪಾಸ್‌ಗಳನ್ನು ಕಡ್ಡಾಯವಾಗಿ ತಮ್ಮ ವಾಹನಗಳಿಗೆ ಅಂಟಿಸಿ ಪ್ರದರ್ಶಿಸಬೇಕೆಂದು ಜಂಟಿ ಪತ್ರದಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News