ಮೇಜರ್ ಉನ್ನಿಕೃಷ್ಣನ್ ನಾಮಫಲಕ ಧ್ವಂಸ ಪ್ರಕರಣ: ತನಿಖೆಗೆ ಒತ್ತಾಯಿಸಿ ಠಾಣೆಗೆ ದೂರು

Update: 2018-09-18 13:40 GMT

ಬೆಂಗಳೂರು, ಸೆ.18: ನಗರದ ಯಲಹಂಕದಲ್ಲಿರುವ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನಾಮಫಲಕ ಧ್ವಂಸಗೊಳಿಸಿದ ಆರೋಪ ಪ್ರಕರಣ ಸಂಬಂಧ ಇಂಡಿಯನ್ ಆರ್ಮಿ ಫೋರಂ ಇಲ್ಲಿನ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿ, ತನಿಖೆಗೆ ಒತ್ತಾಯಿಸಿದೆ.

ಸಂದೀಪ್ ಉನ್ನಿಕೃಷ್ಣನ್ ಸ್ಮರಣಾರ್ಥ ಅವರ ಹೆಸರಿಟ್ಟು ಸ್ಲಾಬ್ ಅಳವಡಿಸುವ ಸಂದರ್ಭದಲ್ಲಿ ಕೆಲವು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಸ್ಥಳೀಯ ಕನ್ನಡಿಗನ ಹೆಸರಿಡುವಂತೆ ಕೆಲ ಮುಖಂಡರು ಆಗ್ರಹಿಸಿದ್ದರು. ಇದೆಲ್ಲದರ ನಡುವೆ ಸರಕಾರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹೆಸರಿಟ್ಟು, ನಾಮಫಲಕ ಅಳವಡಿಸಿತ್ತು. ಇದೇ ವಿಚಾರಕ್ಕೆ ಅಲ್ಲಿನ ಹಲವು ಮುಖಂಡರೇ ಈ ಕೃತ್ಯ ಎಸಗಿದ್ದಾರೆ ಎಂದು ಇಂಡಿಯನ್ ಆರ್ಮಿ ಫೋರಂ ಆರೋಪಿಸಿದೆ.

ರವಿವಾರ ರಾತ್ರಿ ಹಾಲಿನ ವಾಹನವೊಂದು ಢಿಕ್ಕಿ ಹೊಡೆದು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಭಾವಚಿತ್ರ ಇದ್ದ ನಾಮಫಲಕಕ್ಕೆ ಹಾನಿಯಾಗಿತ್ತು. ಬ್ರೇಕ್ ವೈಫಲ್ಯದಿಂದಾಗಿ ವಾಹನ ನಿಯಂತ್ರಣ ಕಳೆದುಕೊಂಡು ಫಲಕಕ್ಕೆ ಢಿಕ್ಕಿ ಹೊಡೆದಿತ್ತು. ಘಟನೆ ಬಳಿಕ ಬೆಂಗಳೂರು ಜಲಮಂಡಳಿ ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಚಾಲಕನನ್ನು ಹಿಡಿದು ವಾಹನ ಸಮೇತ ಬಿಬಿಎಂಪಿ ಅಧಿಕಾರಿಗಳಿಗೆ ಒಪ್ಪಿಸಿದ್ದರು. ನಂತರ ಸ್ಥಳೀಯರು ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದು ಮರು ನಿರ್ಮಾಣ ಮಾಡಿಕೊಡುವುದಾಗಿ ವಾಹನದ ಮಾಲಕರು ಒಪ್ಪಿಕೊಂಡಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News