ಬೆಂಗಳೂರು ಕೃಷಿ ವಿವಿ ನೂತನ ಕುಲಪತಿಯಾಗಿ ಡಾ.ಎಸ್.ರಾಜೇಂದ್ರ ಪ್ರಸಾದ್ ನೇಮಕ

Update: 2018-09-18 13:42 GMT

ಬೆಂಗಳೂರು, ಸೆ. 18: ಬೆಂಗಳೂರು ಕೃಷಿ ವಿವಿ ನೂತನ ಕುಲಪತಿಯನ್ನಾಗಿ ಡಾ. ಎಸ್.ರಾಜೇಂದ್ರ ಪ್ರಸಾದ್‌ರವರನ್ನು ಮುಂದಿನ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿ ರಾಜ್ಯಪಾಲ ವಜುಭಾಯಿ ವಾಲ ಆದೇಶ ಹೊರಡಿಸಿದ್ದಾರೆ.

ರಾಜೇಂದ್ರ ಪ್ರಸಾದ್, ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದವರು. ಇದುವರೆಗೆ 295 ವೈಜ್ಞಾನಿಕ ಪ್ರಕಟಣೆಗಳನ್ನು ಪ್ರಕಟಿಸಿರುತ್ತಾರೆ. ಎಳು ಪಿಎಚ್‌ಡಿ, 14 ಎಂ.ಎಸ್ಸಿ(ಕೃಷಿ) ವಿದ್ಯಾರ್ಥಿಗಳಿಗೆ ಮಾಗರ್ದರ್ಶಕರಾಗಿದ್ದು, ಕೃಷಿ ವಿವಿ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಇವರ ವಿದ್ಯಾರ್ಥಿಯು ಪ್ರಧಾನಮಂತ್ರಿಯ ಫೆಲೋಶಿಪ್ ಪಡೆದಿರುತ್ತಾರೆ. ಥೈಲ್ಯಾಂಡ್, ನೆದರ್‌ಲ್ಯಾಂಡ್ಸ್ ಮತ್ತು ಫಿಲಿಪೈನ್ಸ್ ದೇಶಗಳಲ್ಲಿ ಬೀಜೋತ್ಪಾದನೆಯ ಕುರಿತು ಫೆಲೋಶಿಪ್ ಉನ್ನತ ತರಬೇತಿಯನ್ನು ಪಡೆದಿರುತ್ತಾರೆ.

ಆರಕ್ಕೂ ಹೆಚ್ಚು ಅಂತರ್‌ರಾಷ್ಟ್ರೀಯ ಸಂಶೋದನಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವನ್ನು ಪಡೆದಿರುತ್ತಾರೆ ಮತ್ತು ಹದಿಮೂರಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಅಧ್ಯಕ್ಷ/ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ. ಆರಕ್ಕೂ ಹೆಚ್ಚು ರಾಜ್ಯ /ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ.

ಫಿಲಿಪೈನ್ಸ್, ತೈವಾನ್, ನೆದರ್‌ಲ್ಯಾಂಡ್ಸ್, ಜರ್ಮನಿ, ಪ್ರಾನ್ಸ್, ಬೆಲ್ಜಿಯಮ್, ಮಲೇಷಿಯ, ನೇಪಾಳ, ಸಿಂಗಾಪುರ, ಅಮೆರಿಕ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಕಾರ್ಯಾಗಾರ/ಸಮ್ಮೇಳನಗಳಲ್ಲಿ ಭಾಗವಹಿಸಿರುತ್ತಾರೆ. ಹದಿನೆಂಟಕ್ಕೂ ಹೆಚ್ಚು ಸಂಶೋಧನಾ ಯೋಜನೆಗಳಿಗೆ ಪ್ರಧಾನ ಸಂಶೋಧಕರಾಗಿರುತ್ತಾರೆ. ಪ್ರಸ್ತುತ ಬೆಂಗಳೂರಿನ ಜಿಕೆವಿಕೆಯ ಕೃಷಿ ಕಾಲೇಜಿನ ಡೀನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News