ಬೆಂಗಳೂರು: ಮರಗಳ ತೆರವು ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ; ಜನರಿಗೆ ಸಂಕಷ್ಟ

Update: 2018-09-18 14:05 GMT

ಬೆಂಗಳೂರು, ಸೆ.18: ಮಳೆಗಾಲಕ್ಕೂ ಮೊದಲೇ ಅರಣ್ಯ ವಿಭಾಗದ ಅಧಿಕಾರಿಗಳು ಮರಗಳ ತೆರವಿಗೆ ಮುಂದಾಗದಿದ್ದರಿಂದ ನಗರದ ಹಲವೆಡೆ ಜನರು ಸಂಕಷ್ಟವನ್ನು ಅನುಭವಿಸುವಂತಾಗಿದೆ.

ನಗರದಾದ್ಯಂತ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದಾಗಿ ಅನೇಕ ಮರಗಳು ಬುಡಸಮೇತ ಧರೆಗುರುಳಿವೆ. ಅಲ್ಲದೆ, ಹಲವಾರು ಮುಖ್ಯ ರಸ್ತೆಗಳಲ್ಲಿ ಮರದ ಕೊಂಬೆಗಳು ವಾಹನಗಳ ಮೇಲೆ ಉರುಳುತ್ತಿವೆ. ಇದರಿಂದಾಗಿ ಸಾವು-ನೋವು ಸಂಭವಿಸುವ ಸಾಧ್ಯತೆಗಳಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಬೀಳುವ ಸ್ಥಿತಿಯಲ್ಲಿರುವ, ಒಣಗಿರುವ ಹಾಗೂ ಟೊಳ್ಳಾಗಿರುವ ಮರಗಳನ್ನು ಗುರುತಿಸಿ ಮಳೆಗಾಲಕ್ಕೂ ಮೊದಲೇ ಅವುಗಳ ತೆರವು ಕಾರ್ಯಾಚರಣೆ ನಡೆಸುವುದು ಪಾಲಿಕೆಯ ಅರಣ್ಯ ವಿಭಾಗದ ಕರ್ತವ್ಯ. ಆದರೆ, ಪಾಲಿಕೆಯ ಸಿಬ್ಬಂದಿ ಸಮರ್ಪಕವಾಗಿ ಕಾರ್ಯಾಚರಣೆ ನಡೆಸದ ಪರಿಣಾಮ ಸಣ್ಣ ಮಳೆಗೂ ಹತ್ತಾರು ಮರಗಳು ಉರುಳಿ ಜನರು ಕಷ್ಟಪಡುವಂತಾಗಿದೆ.

ನಗರದಲ್ಲಿ ಕಳೆದ ವರ್ಷ ಸುರಿದ ಮಳೆಯಿಂದಾಗಿ ಮಿನರ್ವ ವೃತ್ತದ ಬಳಿ ಕಾರಿನ ಮೇಲೆ ಬೃಹತ್ ಮರ ಉರುಳಿದ ಪರಿಣಾಮ ಒಂದೇ ಕುಟುಂಬದ ಮೂರು ಜನ ಸಾವನ್ನಪ್ಪಿದ್ದರು. ಈ ವರ್ಷದಲ್ಲಿಯೂ ಇಲಾಖೆಯ ಅಧಿಕಾರಿಗಳು ಎಚ್ಚತ್ತುಕೊಂಡಿಲ್ಲ. ರವಿವಾರ ಸುರಿಧ ಮಳೆಯಿಂದಾಗಿ ವಿವಿಧ ಕಡೆಗಳಲ್ಲಿ ಹತ್ತಾರು ಮರಗಳು ಧರೆಗುರುಳಿದಿದ್ದು, ಬೃಹತ್ ಮರವೊಂದು ಆಟೋ, ಕಾರು ಹಾಗೂ ದ್ವಿಚಕ್ರ ವಾಹನಗಳ ಮೇಲೆ ಬಿದ್ದು ಮೂರು ಜನರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.

ಸಿಬ್ಬಂದಿ ಕೊರತೆ: ಬಿಬಿಎಂಪಿಯ ಎಲ್ಲ ಎಂಟು ವಲಯಗಳಿಗೆ ಸೇರಿ ಒಟ್ಟು 21 ಕಾರ್ಯಾಚರಣೆ ತಂಡಗಳಿದ್ದು, ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿವೆ. ಬಿದ್ದಿರುವ ಒಂದು ಮರ ತೆರವುಗೊಳಿಸುವ ವೇಳೆಗೆ ಮತ್ತೊಂದು ಭಾಗದಲ್ಲಿ ಮರ ಬಿದ್ದಿರುತ್ತದೆ. ನಗರದಲ್ಲಿ ಮಳೆ ಬೀಳುವ ವೇಳೆ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಶೀಘ್ರ ಸ್ಥಳಕ್ಕೆ ಧಾವಿಸಿ ಮರಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಅರಣ್ಯ ವಿಭಾಗದ ಅಧಿಕಾರಿಗಳು ಸಂಕಷ್ಟವನ್ನು ಹೇಳುತ್ತಾರೆ.

ಅರಣ್ಯ ವಿಭಾಗದಲ್ಲಿರುವ 21 ತಂಡಗಳು ಮಳೆಗಾಲಕ್ಕೂ ಮೊದಲೇ ಕಾರ್ಯಾಚರಣೆ ನಡೆಸಿ ಅಪಾಯಕಾರಿ ಸ್ಥಿತಿಯಲ್ಲಿರುವ 200 ಮರಗಳು, 1500 ಮರದ ಕೊಂಬೆಗಳು, 50-60 ಒಣಗಿದ ಮರಗಳನ್ನು ತೆರವುಗೊಳಿಸಿದ್ದಾರೆ. ಸಾರ್ವಜನಿಕರಿಂದ ಬರುವ ದೂರುಗಳನ್ನು ಆಧರಿಸಿ ತೆರವು ಕಾರ್ಯಾಚರಣೆ ನಡೆಸಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಲು ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

28 ತಂಡಗಳ ಅಗತ್ಯವಿದೆ: ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ 28 ಕಾರ್ಯಾಚರಣೆ ತಂಡಗಳ ಅಗತ್ಯವಿದೆ. 28 ತಂಡಗಳನ್ನು ನೇಮಕ ಮಾಡುವ ಮೂಲಕ ಮರಗಳ ತೆರವು ಕಾರ್ಯಾಚರಣೆ ನಡೆಸಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ತಂಡಗಳನ್ನು ನೀಡಬೇಕು ಹಾಗೂ ಅನುದಾನ ಮೀಸಲಿಡಬೇಕು ಎಂದು ಮೇಯರ್‌ಗೆ ಮನವಿ ಮಾಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News