ದಕ್ಷಿಣ ವಲಯ ಪರಿಷತ್ತಿನ 28ನೇ ಸಭೆ ಯಶಸ್ವಿ: ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್

Update: 2018-09-18 14:24 GMT

ಬೆಂಗಳೂರು, ಸೆ.18: ದಕ್ಷಿಣ ವಲಯ ಪರಿಷತ್ತಿನ ಸಭೆಯು ಅತ್ಯಂತ ಯಶಸ್ವಿಯಾಗಿದ್ದು, ದಕ್ಷಿಣ ಭಾರತದ ರಾಜ್ಯಗಳು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚೆ ಮಾಡಿದ್ದೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ತಿಳಿಸಿದರು.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ವಲಯ ಪರಿಷತ್ತಿನ 28ನೇ ಸಭೆಯ ಬಳಿಕ ಮಾತನಾಡಿದ ಅವರು, ಇವತ್ತಿನ ಸಭೆಯಲ್ಲಿ 27 ವಿಷಯಗಳ ಪೈಕಿ 22 ವಿಷಯಗಳ ಬಗ್ಗೆ ಯಶಸ್ವಿಯಾಗಿ ಚರ್ಚೆ ನಡೆಸಿದ್ದೇವೆ. ಮುಂದಿನ ಸಭೆಯನ್ನು ತಮಿಳುನಾಡು ಸರಕಾರ ಆಯೋಜಿಸಲಿದೆ ಎಂದರು.

ಆರ್ಥಿಕ ಮತ್ತು ಸಾಮಾಜಿಕ ಯೋಜನೆ, ಗಡಿ ಸಮಸ್ಯೆ, ಭಾಷಾ ಅಲ್ಪಸಂಖ್ಯಾತರು ಅಥವಾ ಅಂತರರಾಜ್ಯ ಸಾರಿಗೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ವಲಯ ಪರಿಷತ್ತುಗಳು ಚರ್ಚಿಸಿ, ಅಗತ್ಯ ಶಿಫಾರಸ್ಸುಗಳನ್ನು ಮಾಡುವುದು ಕಡ್ಡಾಯ ಮಾಡಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಕೇರಳ ಹಾಗೂ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಹಾನಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜನಾಥ್‌ಸಿಂಗ್, ಎರಡು ಸರಕಾರಗಳು ನಮಗೆ ಸಲ್ಲಿಸುವ ಮನವಿಯ ಆಧಾರದ ಮೇಲೆ ನಾವು ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಸರಕಾರದ ಅಧಿಕಾರಿಗಳ ತಂಡವನ್ನು ಕಳುಹಿಸಿದ್ದೇವೆ. ಆ ತಂಡಗಳು ನಮಗೆ ನೀಡಿರುವ ವರದಿಯನ್ನು ಆಧರಿಸಿ, ಕೇರಳ ಹಾಗೂ ಕರ್ನಾಟಕಕ್ಕೆ ಅಗತ್ಯ ನೆರವನ್ನು ಕೇಂದ್ರ ಸರಕಾರ ನೀಡಲಿದೆ ಎಂದರು.

ಎಲ್ಲ ದೇಶಗಳಿಗೂ ತಮ್ಮಲ್ಲಿ ಎಷ್ಟು ಮಂದಿ ಸ್ವದೇಶಿಯರು, ಎಷ್ಟು ಮಂದಿ ವಿದೇಶಿಯರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಇರಬೇಕು. ಅಸ್ಸಾಂನಲ್ಲಿ ಇತ್ತೀಚೆಗೆ ಅಂತಹ ಸಮೀಕ್ಷೆ ನಡೆಸಲಾಗಿದೆ. ರಾಜ್ಯ ಸರಕಾರಗಳು ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ರಾಜನಾಥ್‌ಸಿಂಗ್ ಹೇಳಿದರು.

ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಅವರು, ಕಠಿಣವಾದ ಕಾನೂನುಗಳನ್ನು ಜಾರಿಗೆ ತರುವ ಅಗತ್ಯವಿದ್ದರೆ ಖಂಡಿತ ತರುತ್ತೇವೆ. ಈಗ ವರದಿಯಾಗುತ್ತಿರುವ ಎಲ್ಲ ಪ್ರಕರಣಗಳಲ್ಲೂ ಕಠಿಣವಾಗಿಯೇ ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನು, ಸುವ್ಯವಸ್ಥೆ ಕಾಪಾಡುವುದು ಆಯಾ ರಾಜ್ಯ ಸರಕಾರಗಳ ಕರ್ತವ್ಯವಾಗಿದ್ದು, ಅವರ ಕೆಲಸವನ್ನು ಅವರು ಮಾಡುತ್ತಾರೆ ಎಂದರು.

ಅಂತರರಾಜ್ಯ ಪರಿಷತ್ತಿನ ಕಾರ್ಯದರ್ಶಿ ಆರ್.ಬುಹ್ರೀಲ್ ಮಾತನಾಡಿ, ತಿರುವನಂತಪುರಂನಲ್ಲಿ ಕಳೆದ ಸಾಲಿನಲ್ಲಿ ನಡೆದ ಸಭೆಯಲ್ಲಿ ಚರ್ಚೆಗೆ ಒಳಪಟ್ಟಿದ್ದ ಮೀನುಗಾರರ ಭದ್ರತೆ, ಪರ್ಯಾಯ ದ್ವೀಪ ಪ್ರವಾಸೋದ್ಯಮ ರೈಲುಗಳ ಪರಿಚಯ, ಎಸ್ಸಿ-ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಸಮಾನವಾಗಿ ವಿದ್ಯಾರ್ಥಿ ವೇತನಕ್ಕೆ ಅನುದಾನ ಹಂಚಿಕೆ ಮಾಡುವುದು. ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಅತ್ಯುತ್ತಮ ಸಲಕರಣೆಗಳನ್ನು ಒದಗಿಸುವುದು. ಪುದುಚೇರಿಯ ವಿಮಾನ ನಿಲ್ದಾಣ ಅಭಿವೃದ್ಧಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಇಂದಿನ ಸಭೆಯಲ್ಲೂ ಚರ್ಚಿಸಲಾಗಿದೆ ಎಂದರು.

ಇಂದಿನ ಸಭೆಯಲ್ಲಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ನಡುವೆ ಮೀನುಗಾರಿಕೆ ಹಕ್ಕಿನ ಕುರಿತು ಪುಲಿಕಾಟ್ ಕೆರೆ ವಿವಾದ, ಶೇಷಚಲಂ ಬೆಟ್ಟಗಳಿಂದ ರಕ್ತ ಚಂದನದ ಕಳ್ಳಸಾಗಾಣೆ ತಡೆಯಲು ಸಮಿತಿ ರಚನೆ, ಚೈನ್ನೈ ನಗರಕ್ಕೆ ಕೃಷ್ಣಾ ನದಿಯಿಂದ ನೀರು ಒದಗಿಸುವುದು, ದಕ್ಷಿಣ ವಲಯದಲ್ಲಿರುವ ಕರಾವಳಿ ರಾಜ್ಯಗಳ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್‌ಗಳನ್ನು ವಿತರಿಸುವುದು, ಸೀಗಡಿ ಮೀನು ರಫ್ತಿನಲ್ಲಿ ಆಂಟಿಬಯೋಟಿಕ್ ಅಂಶ ಪತ್ತೆಯಾಗಿರುವ ಕುರಿತು ಚರ್ಚಿಸಿದ್ದೇವೆ ಎಂದು ಅವರು ಹೇಳಿದರು.

ದಕ್ಷಿಣ ವಲಯ ರಾಜ್ಯಗಳ ಪೊಲೀಸ್ ಪಡೆಯನ್ನು ಆಧುನೀಕರಣಗೊಳಿಸುವ ಯೋಜನೆ, ಎಲ್‌ಪಿಜಿ ಗೋದಾಮುಗಳ ನಕ್ಷೆಗೆ ಪಂಚಾಯಿತಿ ಮಟ್ಟದಲ್ಲೆ ನಿರಾಪೇಕ್ಷಣ ಪತ್ರ(ಎನ್‌ಓಸಿ) ನೀಡುವುದು, ಜೈವಿಕ ಇಂಧನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಬುಹ್ರೀಲ್ ತಿಳಿಸಿದರು.

ರಫ್ತು ಮಾಡುತ್ತಿರುವ ಸೀಗಡಿ ಮೀನಿನಲ್ಲಿ ಆ್ಯಂಟಿ ಬಯೋಟಿಕ್ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಸೀಗಡಿ ಮೀನು ರಫ್ತು ಮಾಡಲು ಸೂಕ್ತ ಮಾರ್ಗಸೂಚಿಗಳನ್ನು ರಚಿಸಲು ನಿರ್ಧರಿಸಲಾಗಿದೆ. ಆಂಧ್ರಪ್ರದೇಶದ ವಿಧಾನಸಭಾ ಸ್ಥಾನಗಳು 175 ರಿಂದ 225ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇದ್ದು, ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಪರಿಹಾರ: ತಿರುವನಂತಪುರಂನಿಂದ ಮಂಗಳೂರಿನವರೆಗೆ ಇರುವ ಹೈಸ್ಪೀಡ್ ರೈಲು ಕಾರಿಡಾರ್ ಅನ್ನು ಉಡುಪಿವರೆಗೆ ವಿಸ್ತರಣೆ, ಭಾರತ ಸರಕಾರದ ವೃತ್ತಿಪರ ತೆರಿಗೆ ಮಿತಿ ಪರಿಷ್ಕರಣೆ, ವಸತಿ ಯೋಜನೆಗಳಿಗೆ ಅಗತ್ಯ ಮೂಲಸೌಕರ್ಯ, ಅಂತರರಾಜ್ಯ ಪ್ರಾಣಿಗಳ ಸಂಚಲನ, ತೈಲ ಬೀಜಗಳು ಹಾಗೂ ಸಾಗುವಳಿಗೆ ಪ್ರೋತ್ಸಾಹ ನೀಡುವುದು, ಕೇಂದ್ರ ಹಣಕಾಸು ಆಯೋಗದಡಿಯಲ್ಲಿ ಪುದುಚೇರಿ ಸೇರ್ಪಡೆ ಹಾಗೂ ಅಲ್ಲಿನ ಮೀನುಗಾರರಿಗೆ ರಕ್ಷಣೆ ಒದಗಿಸುವ ವಿಷಯಗಳಿಗೆ ಇಂದಿನ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ವಲಯ ಪರಿಷತ್ತಿನ ಸಂಸ್ಥೆಗಳನ್ನು ಬಲವರ್ಧನೆಗೊಳಿಸುವುದು, ಅಂತರರಾಜ್ಯ ಪರಿಷತ್ತುಗಳು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಪರಸ್ಪರ ಸಹಕಾರ ಮನೋಭಾವ ವೃದ್ಧಿಸಬೇಕು ಎಂಬುದು ನಮ್ಮ ಸರಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ದಕ್ಷಿಣ ವಲಯದ ಎರಡು ಪರಿಷತ್ ಸಭೆಗಳು ಹಾಗೂ ಮೂರು ಸ್ಥಾಯಿ ಸಮಿತಿಯ ಸಭೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು. ಇದಲ್ಲದೆ, ಎಂಟು ಪರಿಷತ್ ಸಭೆಗಳು ಹಾಗೂ 12 ಸ್ಥಾಯಿ ಸಮಿತಿ ಸಭೆಗಳು ಇತರ ವಲಯಗಳಲ್ಲಿ ನಡೆಸಲಾಗಿದೆ. ಈ ಸಭೆಗಳಲ್ಲಿ ಸುಮಾರು 600 ವಿಷಯಗಳ ಕುರಿತು ಚರ್ಚಿಸಲಾಗಿದ್ದು, 406 ವಿಷಯಗಳನ್ನು ಪರಿಹರಿಸಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಮಿಳುನಾಡಿನ ಉಪ ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ, ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ, ಆರೋಗ್ಯ ಸಚಿವ ರಾಮಕೃಷ್ಣರಾವ್, ಕೇರಳದ ಹಣಕಾಸು ಸಚಿವ ಡಾ.ಥಾಮಸ್ ಐಸಾಕ್, ಆಂಧ್ರಪ್ರದೇಶ ಹಣಕಾಸು ಸಚಿವ ವೈ.ರಾಮಕೃಷ್ಣ, ತೆಲಂಗಾಣದ ಗೃಹ ಕಾರ್ಯದರ್ಶಿ, ಅಂಡಮಾನ್ ನಿಕೋಬಾರ್ ದ್ವೀಪದ ಅಡ್ಮಿರಲ್ ಡಿ.ಕೆ.ಜೋಶಿ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ಕಿರುಕುಳ ನೀಡುತ್ತಿದ್ದೆ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ರಾಜನಾಥ್‌ಸಿಂಗ್, ಐಟಿ, ಇಡಿ, ಸಿಬಿಐ ಯಾರಿಗೂ ಅನಗತ್ಯವಾಗಿ ಕಿರುಕುಳ ನೀಡುವುದಿಲ್ಲ. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News