ಸಂಕಷ್ಟದಲ್ಲಿರುವ ಕಲಾವಿದರನ್ನು ಪೋಷಿಸುವವರು ಬೇಕು: ಕಸಾಪ ಅಧ್ಯಕ್ಷ ಮನು ಬಳಿಗಾರ್

Update: 2018-09-18 15:29 GMT

ಬೆಂಗಳೂರು, ಸೆ.18: ಸಂಕಷ್ಟದಲ್ಲಿರುವ ಕಲಾವಿದರನ್ನು ಪೋಷಿಸಿದರೆ ಕಲೆ, ಸಾಹಿತ್ಯ, ಸಂಗೀತ ಬೆಳೆಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದರು.

ಮಂಗಳವಾರ ಚಾಮರಾಜಪೇಟೆಯ ಕಸಾಪದಲ್ಲಿ ಏರ್ಪಡಿಸಿದ ದತ್ತಿ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಿಜವಾಗಿಯೂ ಕಲಾವಿದರ ಬದುಕು ನಾವು ಊಹಿಸುದಷ್ಟು ಸುಖಕರವಾಗಿರಲ್ಲ, ಅದರಲ್ಲೂ, ನಾಟಕರಂಗದ ಕಲಾವಿದರು ಆರ್ಥಿಕವಾಗಿ ಅಸಬಲರಾಗಿರುತ್ತಾರೆ. ಇಂತಹ ಕಲಾವಿದರನ್ನು ಗುರುತಿಸಿ ಸಾಹಿತ್ಯ ಪ್ರೇಮಿಗಳು, ಸಂಸ್ಥೆಗಳು ಪೋಷಿಸಬೇಕು ಎಂದು ವಿನಂತಿಸಿದರು.

ಕನ್ನಡ ಸಾಹಿತ್ಯದ ಸೇವೆಯಲ್ಲಿ ಎಲೆಮರೆ ಕಾಯಿಗಳಾಗಿ ಅನೇಕ ಕಲಾವಿದರು ಸೇವೆ ಸಲ್ಲಿಸುತ್ತಿದ್ದಾರೆ. ಅಂತವರನ್ನು ಸರಕಾರ ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಬೇಕು. ತಮಿಳುನಾಡೋ, ಮಹಾರಾಷ್ಟ್ರದಲ್ಲೋ ಹುಟ್ಟಿದರೆ, ಸಾಧಕರನ್ನುಪ್ರೋತ್ಸಾಹಿಸಿ, ಒತ್ತಡ ಹೇರುವ ಮೂಲಕ ಸರಕಾರ ನೀಡುವ ಪ್ರಶಸ್ತಿಗಳಿಗೆ ಸಾಹಿತ್ಯಾಸಕ್ತರು ಶಿಫಾರಸ್ಸು ಮಾಡುತ್ತಿದರು ಎಂದು ತಿಳಿಸಿದರು.

ರಾಜ್ಯ ಪ್ರಶಸ್ತಿಯನ್ನು ವರ್ಷಕ್ಕೆ 50 ಸಾಧಕರಿಗೆ ನೀಡುತ್ತಾರೆ. ಅವರಷ್ಟೇ ಸಾಧಕರಲ್ಲ, ಸಿನೆಮಾ ರಂಗದಲ್ಲಿ ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ವೈಜನಾಥ ಬಿರಾದಾರರಂತಹ ಅನೇಕರು ಪ್ರಶಸ್ತಿಗಳಿಗೆ ಅರ್ಹರಾಗಿದ್ದಾರೆ. ತಮಿಳುನಾಡಿನ ರಸ್ತೆ, ವೃತ್ತ, ಕೆರೆಕಟ್ಟೆ, ಉದ್ಯಾನವನಗಳ ಎಲ್ಲ ಮೂಲೆಗಳಲ್ಲೂ ಸಾಹಿತಿಗಳ, ನಾಡು-ನುಡಿಗಾಗಿ ದುಡಿದವರ ಹೆಸರನ್ನಿಟ್ಟಿದ್ದಾರೆ. ಇವೆಲ್ಲವನ್ನು ಗಮನಿಸಿದಾಗ ದೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಅಭಿವೃದ್ಧಿಗೆ ಸಾಂಘಿಕವಾಗಿ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದರು.

ದತ್ತಿ ದಾನಿ ಕೆ.ಮೋಹನ್‌ದೇವ್ ಆಳ್ವ ಮಾತನಾಡಿ, ಲೀಲಾವತಿ, ಬಿರಾದಾರ ಪ್ರಶಸ್ತಿಗಳನ್ನು ಅರಸಿ ಹೋದವರಲ್ಲ, ಇಂತವರನ್ನು ವಿಶ್ವವಿದ್ಯಾಲಯಗಳು ಗುರುತಿಸಿ ಗೌರವ ಡಾಕ್ಟರೇಟ್ ನೀಡಬೇಕು. ಇವರನ್ನು ಸರಕಾರ ಗುರುತಿಸಿಲ್ಲದಿದ್ದರೂ ಜನಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಸಂಗೀತಗಾರ್ತಿ ಎಚ್.ಆರ್.ಲೀಲಾವತಿ ಹಾಗೂ ಹಾಸ್ಯ ಕಲಾವಿದ ವೈಜನಾಥ ಬಿರಾದಾರರಿಗೆ ದತ್ತಿ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News