ಪಿಡಬ್ಲೂಡಿಯಲ್ಲಿ ಮೀಸಲಾತಿ ಕಲ್ಪಿಸುವ ಆದೇಶಕ್ಕೆ ಹೈಕೋರ್ಟ್ ತಡೆ

Update: 2018-09-18 15:33 GMT

ಬೆಂಗಳೂರು, ಸೆ.18: ರಾಜ್ಯ ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡಗಳ(ಎಸ್‌ಟಿ) ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸಿರುವ ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ಸೆ.27ರವರೆಗೆ ಮಧ್ಯಂತರ ತಡೆ ನೀಡಿದೆ.

ಈ ಕುರಿತಂತೆ ಎಚ್.ಎಂ.ವಿಶ್ವನಾಥ್ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಎಂ.ಚಂದ್ರಶೇಖರ್, ಸರಕಾರದ ಈ ಕ್ರಮ ಸಂವಿಧಾನ ಬಾಹಿರ. ಯಾರು ಅರ್ಹರಿದ್ದಾರೊ ಅವರಿಗೆ ಮಾತ್ರ ಗುತ್ತಿಗೆ ನೀಡಬೇಕು ಎಂದು ವಾದ ಮಂಡಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠವು ಮಧ್ಯಂತರ ತಡೆ ನೀಡಿ ಆದೇಶಿಸಿದೆ.

ಪ್ರಕರಣವೇನು: ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ 50 ಲಕ್ಷ ಮೊತ್ತದವರೆಗಿನ ಯೋಜನೆಗಳ ಕಾಮಗಾರಿಯ ಟೆಂಡರ್‌ನಲ್ಲಿ ಪರಿಶಿಷ್ಟ ಜಾತಿ (ಎಸ್.ಸಿ) ಹಾಗೂ ಪರಿಶಿಷ್ಟ ವರ್ಗದವರಿಗೆ (ಎಸ್.ಟಿ) ಗುತ್ತಿಗೆ ನೀಡಲು ಶೇ.24ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಈ ಕುರಿತಂತೆ ರಾಜ್ಯ ಸರಕಾರ 2017ರ ಜುಲೈ 17ರಂದು ಅಧಿಸೂಚನೆ ಹೊರಡಿಸಿದೆ.

ಅರ್ಜಿದಾರರು ಇದನ್ನು ಆಕ್ಷೇಪಿಸಿದ್ದಾರೆ. ಸರಕಾರಿ ನಿರ್ಮಾಣ ಯೋಜನೆಗಳ ಕಾಮಗಾರಿ ಗುತ್ತಿಗೆಯನ್ನು ಇ-ಟೆಂಡರ್ ಮೂಲಕ ಗುತ್ತಿಗೆ ನೀಡಲಾಗುತ್ತಿದೆ. ದೇಶದ ಯಾವುದೇ ಗುತ್ತಿಗೆದಾರರು ಇ-ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಆದರೆ, ಮೀಸಲು ಕಲ್ಪಿಸುವುದರಿಂದ, ಎಸ್.ಸಿ ಹಾಗೂ ಎಸ್.ಟಿ ಸಮುದಾಯದವರ ಹೆಸರಿನಲ್ಲಿ ಬೇರೆಯವರು ಟೆಂಡರ್ ಹಾಕುವ ಸಾಧ್ಯತೆಯಿದೆ. ಅಂತೆಯೇ ಮೀಸಲಾತಿಯೂ ದುರುಪಯೋಗವಾಗುತ್ತದೆ. ಹೀಗಾಗಿ, ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದ್ದಾರೆ. ಅರ್ಜಿದಾರರ ಪರ ಪವನಚಂದ್ರ ಶೆಟ್ಟಿ ವಕಾಲತ್ತು ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News