ವಿಷ್ಣುವರ್ಧನ್ ಚಿತ್ರರಂಗದ ನೈಜ ನಟ: ಬಹುಭಾಷಾ ನಟಿ ವಿನಯಾ ಪ್ರಕಾಶ್

Update: 2018-09-18 15:58 GMT

ಬೆಂಗಳೂರು, ಸೆ.18: ನಮಗೆ ಕಾದಂಬರಿಗಳಲ್ಲಿ ನಾಯಕ ನಟನಾಗಿ ಕಾಣುತ್ತಿದ್ದ ವಿಷ್ಣುವರ್ಧನ್, ನಾನು ಮೊದಲ ಚಿತ್ರ ಮಾಡುವ ಸಂದರ್ಭದಲ್ಲಿ ಕಲಾವಿದರಿಗೆ ಸಂಕೋಚ ಇರಬಾರದು ಎಂದು ಸ್ಪೂರ್ತಿ, ಧೈರ್ಯ ತುಂಬುತ್ತಿದ್ದ ನಿಜವಾದ ನಟರಾಗಿದ್ದರು ಎಂದು ಬಹುಭಾಷಾ ನಟಿ ವಿನಯಾ ಪ್ರಕಾಶ್ ಹೇಳಿದರು.

ಮಂಗಳವಾರ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವದಲ್ಲಿ ಡಾ.ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ನಾವು ಕಾಲೇಜು ದಿನಗಳಲ್ಲಿ ಕಲಿಯಬೇಕಾದ ಸಂದರ್ಭದಲ್ಲಿ ಪುಸ್ತಕ ಓದುವ ಹುಚ್ಚು ಇತ್ತು. ಅದರಲ್ಲಿ ಬರುವ ನಾಯಕನ ಪಾತ್ರಗಳಲ್ಲಿ ವಿಷ್ಣು ಅವರನ್ನು ಕಲ್ಪಿಸಿಕೊಂಡರೆ, ನಾಯಕಿಯ ಪಾತ್ರದಲ್ಲಿ ನಮ್ಮನ್ನು ನಾವು ಕಲ್ಪನೆ ಮಾಡಿಕೊಳ್ಳುತ್ತಿದ್ದೆವು. ಅಷ್ಟರ ಮಟ್ಟಿಗೆ ಅವರ ಕಲೆ, ಶೈಲಿ ಹಾಗೂ ನಟನೆಯನ್ನು ಇಷ್ಟ ಪಡುತ್ತಿದ್ದೆವು. ಅನಂತರ ಅವರ ಜೊತೆ ನಟಿಸಲು ಅವಕಾಶ ದೊರೆಕಿತು ಎಂದರು.

ಮೊದಲ ಚಿತ್ರದಲ್ಲಿ ಸಂತೆಗೆ ಹೋಗೋಣ ಬಾ ಗೀತೆಯ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯುತ್ತಿತ್ತು. ನಮಗೆ ಸಾರ್ವಜನಿಕವಾಗಿ ನೃತ್ಯ ಮಾಡಿದ ಅಭ್ಯಾಸವಿರಲಿಲ್ಲ. ಆದುದರಿಂದ ಸಂಕೋಚ ಪಡುತ್ತಿದ್ದೆವು. ಆದರೆ, ವಿಷ್ಣುವರ್ಧನ್ ನನ್ನ ಕೈ ಹಿಡಿದುಕೊಂಡು ಹೋಗಿ ಕಲಾವಿದರಿಗೆ ಸಂಕೋಚ, ನಾಚಿಕೆ ಇರಬಾರದು ಎಂದು ಧೈರ್ಯ ತುಂಬಿ ನೃತ್ಯ ಮಾಡಿಸಿದ್ದರು ಎಂದು ವಿನಯಾ ಪ್ರಕಾಶ್ ವಿಷ್ಣು ಅವರೊಂದಿನ ನೆನಪುಗಳನ್ನು ತೆರೆದಿಟ್ಟರು.

ನಟ ರವಿಶಂಕರ್ ಗೌಡ ಮಾತನಾಡಿ, ಉತ್ತರ ಕರ್ನಾಟಕದ ಜನರ ಬಗ್ಗೆ ವಿಷ್ಣುವರ್ಧನ್ ಅಪಾರವಾದ ಪ್ರೀತಿಯನ್ನು ಹೊಂದಿದ್ದರು. ಅವರ ಭಾಷೆ ಬಳಕೆ, ಅಕ್ಷರ ಉಚ್ಛಾರಣೆ ಅತ್ಯಂತ ಸೊಗಸಾಗಿ ಇರುತ್ತಿದ್ದವು. ಬಲಗೈನಲ್ಲಿ ಕೊಟ್ಟ ವಿಚಾರ ಎಡಗೈಗೆ ತಿಳಿಯಬಾರದು ಎಂಬ ವ್ಯಕ್ತಿತ್ವ ಅವರದ್ದಾಗಿತ್ತು. ಹೀಗಾಗಿ, ಅವರ ಕೆಲಸಗಳು ಅವರ ಆಪ್ತರಿಗೆ ಅಷ್ಟೇ ತಿಳಿಯುತ್ತಿದ್ದವು ಎಂದು ಹೇಳಿದರು.

ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಮಾತನಾಡಿ, ಇಂದಿನ ಚಿತ್ರಗಳಲ್ಲಿ ವಿಷ್ಣುವರ್ಧನ್‌ರ ಕಲೆಯಿಲ್ಲದೆ ಚಿತ್ರಗಳನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಅಪಾರವಾದ ಸಂಪತ್ತನ್ನು ಕನ್ನಡ ನಾಡಿಗೆ ಬಿಟ್ಟು ಹೋಗಿದ್ದಾರೆ. ಅವರಿಗೆ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು. ಆದರೆ, ಪ್ರಶಸ್ತಿಯನ್ನು ಕೊಡಲು ಅವರ ಬಯೋಡೇಟಾ ಕೇಳುತ್ತಿರುವುದು ಅವಮಾನಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಷ್ಣು ಅವರನ್ನು ಅಂತ್ಯಸಂಸ್ಕಾರ ಮಾಡುವ ಮೂಲಕ ಎಲ್ಲವನ್ನೂ ಅಂತ್ಯ ಮಾಡಿದ್ದೇವೆ ಎಂದುಕೊಳ್ಳುವುದು ಸಲ್ಲದು. ಅವರ ನೆನಪಿಗಾಗಿ ಸ್ಮಾರಕವನ್ನು ನಿರ್ಮಾಣ ಮಾಡಬೇಕು. ಯಾರ ವಿರೋಧವೂ ಕಟ್ಟಿಕೊಳ್ಳಬೇಕಾದ ಅಗತ್ಯವಿಲ್ಲ. ವಿವಾದವನ್ನು ಮಾಡಿಕೊಂಡರೆ ಅದು ಮತ್ತಷ್ಟು ಜಟಿಲವಾಗುತ್ತದೆ. ಸಮಾಧಾನದಿಂದ ವಿಷ್ಣು ಅವರ ಸ್ಮಾರಕವನ್ನು ನಿರ್ಮಾಣ ಮಾಡುವ ಕಡೆಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಮುಂದಿನ ವರ್ಷದಿಂದ ವಿಷ್ಣು ವರ್ಧನ್ ಅವರ ರಾಷ್ಟ್ರೀಯ ಉತ್ಸವ ಮಾಡುವುದಿಲ್ಲ. ಅವರ ಜನ್ಮದಿನವನ್ನು ರಾಷ್ಟ್ರೀಯ ಆದರ್ಶ ದಿನ ಘೋಷಣೆ ಮಾಡಲಾಗುತ್ತದೆ. ಅಲ್ಲದೆ, ಅಂತರ್‌ರಾಷ್ಟ್ರೀಯ ಉತ್ಸವವನ್ನು ನಡೆಸಲಾಗುತ್ತದೆ. ಮುಂದಿನ ಅಂತರ್‌ರಾಷ್ಟ್ರೀಯ ಉತ್ಸವವನ್ನು ಆಸ್ಟ್ರೇಲಿಯಾದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಘೋಷಿಸಿದರು.

ಸಮಾರಂಭದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಚಿತ್ರನಟರಾದ ದುನಿಯಾ ವಿಜಯ್, ಪ್ರೇಮ್, ಬಾಲಾಜಿ ರವಿಚಂದ್ರನ್, ಶ್ರೀನಗರ ಕಿಟ್ಟಿ, ಸತೀಶ್, ವಿಜಯ್ ಸೂರ್ಯ, ಸಿಹಿ ಕಹಿ ಚಂದ್ರು, ರವಿಶಂಕರಗೌಡರು, ಚರಣ್ ರಾಜ್, ರವಿಕೃಷ್ಣ, ನಿರ್ದೇಶಕ ರಘುರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News