ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ದಿಮೆ ಆರಂಭಿಸಲು ತ್ರಿಪುರಕ್ಕೆ ಬನ್ನಿ: ಮುಖ್ಯಮಂತ್ರಿ ಬಿಪ್ಲವ್ ಕುಮಾರ್

Update: 2018-09-18 15:41 GMT

ಬೆಂಗಳೂರು, ಸೆ. 18: ಖಾಸಗಿ ಸಹಭಾಗಿತ್ವಕ್ಕೆ ನಾವು ಮುಕ್ತವಾಗಿದ್ದು, ಬಾಹ್ಯಾಕಾಶ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತ್ರಿಪುರದಲ್ಲಿ ಉದ್ದಿಮೆ ಆರಂಭಿಸಲು ಉದ್ಯಮಿಗಳು ಮುಂದೆ ಬರಬೇಕೆಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ಆಹ್ವಾನ ನೀಡಿದ್ದಾರೆ.

ಮಂಗಳವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಎಲೆಕ್ಟ್ರಾನಿಕ್ಸ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ನೀತಿ ಸಂಬಂಧಿಸಿದ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡುತಿದ್ದರು.

ಅತ್ಯಂತ ಸಣ್ಣ ರಾಜ್ಯವಾಗಿರುವ ತ್ರಿಪುರ ಹೊಸ ರೀತಿಯಲ್ಲಿ ಬೆಳೆಸಲು ಕ್ರಮ ವಹಿಸಿದ್ದು, ಅಲ್ಲಿ ಭೂಮಿ, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳು ಅಗ್ಗವಾಗಿ ದೊರೆಯುತ್ತವೆ. ಶೇ.90ರಷ್ಟು ಸಾಕ್ಷರತೆ ಇರುವ ರಾಜ್ಯ. ಹೀಗಾಗಿ ಉದ್ಯಮಿಗಳು ನೆರವಾಗಬೇಕೆಂದು ಅವರು ಮನವಿ ಮಾಡಿದರು.

ತ್ರಿಪುರ ರಾಜ್ಯದಲ್ಲಿ ರೈಲು, ರಸ್ತೆ ಸಂಪರ್ಕ, ದೂರವಾಣಿ, ಹೈಸ್ಪೀಡ್ ಇಂಟರ್‌ನೆಟ್ ಸೇರಿ ಎಲ್ಲವೂ ಲಭ್ಯವಿದ್ದು, ಅಲ್ಲಿ ಉತ್ಪಾದನಾ ವೆಚ್ಚವೂ ಕಡಿಮೆ ಮಾಡಿ ಗುಣಮಟ್ಟದ ಉತ್ಪನ್ನ ಹೊರತಂದರೆ ಇಡೀ ಮಾರುಕಟ್ಟೆ ನಿಮ್ಮದೆ ಎಂದು ಅವರು ಉದ್ಯಮಿಗಳಿಗೆ ಆಹ್ವಾನ ನೀಡಿದರು.

ಸಮ್ಮೇಳನದಲ್ಲಿ ಪಾಲ್ಗೊಡಿದ್ದ ಇಸ್ರೋ ಅಧ್ಯಕ್ಷ ಕೆ.ಶಿವನ್ ಮಾತನಾಡಿ, ದೇಶದಲ್ಲಿ ತೈಲದ ಬಳಿಕ ಹೆಚ್ಚು ಪ್ರಮಾಣದಲ್ಲಿ ಆಮದಾಗುತ್ತಿರುವುದು ಎಲೆಕ್ಟ್ರಾನಿಕ್ಸೃ್ ವಸ್ತುಗಳು. ಇವು ಸದ್ದಿಲ್ಲದೆ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ. 2020ರ ವೇಳೆಗೆ ವಹಿವಾಟು ಮೌಲ್ಯ 400 ಬಿಲಿಯನ್‌ಗೆ ಏರಲಿದೆ. ಆದರೆ, ನಾವು ಕೇವಲ 100 ಬಿಲಿಯನ್ ಮೌಲ್ಯದಷ್ಟು ಉತ್ಪಾದನಾ ಸಾಮರ್ಥ್ಯ ಹೊಂದಿದ್ದೇವೆ ಎಂದು ಹೇಳಿದರು.

ರೂಪಾಯಿ ಮೌಲ್ಯ ಕುಸಿದಿರುವ ಹಿಂದೆ ಈ ಮಾರುಕಟ್ಟೆಯ ಪಾತ್ರ ಬಹಳಷ್ಡು ಇದೆ. ಎಲ್ಲವನ್ನೂ ಆಮದು ಮಾಡುವ ಬದಲು ನಾವೆ ವಸ್ತುಗಳನ್ನು ಉತ್ಪಾದಿಸುವಂತಾಗಬೇಕು. ಕೈಗಾರಿಕೆಗಳ ಉತ್ಪನ್ನಗಳನ್ನು ಇಸ್ರೋ ಕೊಳ್ಳಲಿದೆ. ಆದುದರಿಂದ ಮಾರುಕಟ್ಟೆಯ ಆತಂಕ ಬೇಡ ಎಂದು ಅವರು ಸಲಹೆ ನೀಡಿದರು.

ಬಾಹ್ಯಾಕಾಶ ತಂತ್ರಜ್ಞಾನ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲವೋ ಅಲ್ಲೆಲ್ಲಾ ತನ್ನ ಸೌಲಭ್ಯ ಕೇಂದ್ರಗಳನ್ನು ತೆರೆಯಲಿದೆ. ದೇಶದ ಆರು ಕಡೆ ಇಂಥ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗುವುದು. ಇನ್ನೂ ಮರೆಯಲ್ಲಿರುವ (ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಂದುಳಿದಿರುವ) ವಿಶ್ವವಿದ್ಯಾಲಯಗಳಲ್ಲಿಯೂ ಇಸ್ರೋ ತನ್ನ ಸಂಶೋಧನಾ ಪೀಠ ಸ್ಥಾಪಿಸಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News