ನೂತನ ರಾಜಕೀಯ ಪಕ್ಷದ ಹೆಸರು ಘೋಷಿಸಿದ ನಟ ಉಪೇಂದ್ರ

Update: 2018-09-18 16:10 GMT

ಬೆಂಗಳೂರು, ಸೆ.18: ನಟ ಉಪೇಂದ್ರ ತಮ್ಮ ಅಭಿಮಾನಿಗಳ ಜೊತೆಗೆ 51 ಹುಟ್ಟು ಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿಯೆ ‘ಉತ್ತಮ ಪ್ರಜಾಕೀಯ ಪಕ್ಷ’ವನ್ನು ಅಧಿಕೃತವಾಗಿ ಘೋಷಿಸಿದರು.

ನಗರದ ಕತ್ರಿಗುಪ್ಪೆಯಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆಗೆ 51ನೆ ಹುಟ್ಟು ಹಬ್ಬ ಆಚರಿಸಿಕೊಂಡ ಅವರು, ಸಿನೆಮಾ ಕ್ಷೇತ್ರಕ್ಕೆ ಬಂದ ನಂತರ ವೈಯಕ್ತಿಕವಾಗಿ ಹುಟ್ಟುಹಬ್ಬ ಆಚರಿಸಿಕೊಂಡವನಲ್ಲ. ನನ್ನ ಅಭಿಮಾನಿಗಳೆ ನನ್ನ ಹುಟ್ಟಿದ ದಿನವನ್ನು ಆಚರಿಸಿ, ಸಂಭ್ರಮಿಸುತ್ತಿದ್ದಾರೆ. ನನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳ ದಿನವಾಗಿದೆ. ಹೀಗಾಗಿ ಈ ದಿನವೆ ಉತ್ತಮ ಪ್ರಜಾಕೀಯ ಪಕ್ಷ(ಯುಪಿಪಿ) ಸ್ಥಾಪನೆ ಮಾಡಿದ್ದೇನೆ. ರಾಜಕೀಯದಲ್ಲಿ ಏಳು-ಬೀಳು ಅನ್ನುವುದು ಸಹಜವಾದದ್ದು. ಗುರಿಯ ಮೇಲೆ ನಂಬಿಕೆಯಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಗೆಲುವು ಸಿಗುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಟರ ಹುಟ್ಟುಹಬ್ಬದ ಸಂಭ್ರಮ: ಕನ್ನಡ ಸಿನೆಮಾ ರಂಗದ ಹಿರಿಯ ನಟರಾದ ವಿಷ್ಣುವರ್ಧನ, ಉಪೇಂದ್ರ ಹಾಗೂ ಶೃತಿ ಅವರ ಹುಬ್ಬಹಬ್ಬವನ್ನು ಅಭಿಮಾನಿಗಳು ರಕ್ತದಾನ, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅದ್ಧೂರಿಯಾಗಿ ಆಚರಿಸಿದರು.

ಸಮಾಧಿಗೆ ಪೂಜೆ: ವಿಷ್ಣು ಅಭಿಮಾನಿಗಳು ಸೋಮವಾರ ರಾತ್ರಿಯಿಂದಲೆ ತಮ್ಮ ನೆಚ್ಚಿನ ನಟ ವಿಷ್ಣುವರ್ಧನ್‌ರವರ ಸಮಾಧಿಗೆ ಪೂಜೆ ಸಲ್ಲಿಸಿ, ಅನ್ನದಾನ ಮಾಡುವ ಮೂಲಕ ಸ್ಮರಣೆ ಮಾಡಿದರು. ವಿಷ್ಣು ಅಭಿಮಾನಿ ಬಳಗದಿಂದ ರಕ್ತದಾನ, ಮನರಂಜನಾ ಕಾರ್ಯಕ್ರಮ, ಡೆಂಟಲ್ ಹಾಗೂ ನೇತ್ರದಾನ ಶಿಬಿರವನ್ನು ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News