ಯುಬಿಎಚ್‌ಎಲ್ ಷೇರುಗಳ ಮಾರಾಟ: ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲು ಹೈಕೋರ್ಟ್‌ಗೆ ಮನವಿ

Update: 2018-09-18 16:19 GMT

ಬೆಂಗಳೂರು, ಸೆ.18: ಜಾರಿ ನಿರ್ದೇಶನಾಲಯದ ವಶದಲ್ಲಿರುವ ಯುನೈಟೆಡ್ ಬ್ರೆವರೀಸ್ ಹೋಲ್ಡಿಂಗ್ ಲಿಮಿಟೆಡ್ ಕಂಪೆನಿಯ ಸುಮಾರು 7,500 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡುವ ದಿಸೆಯಲ್ಲಿ ಹೈಕೋರ್ಟ್‌ನ ನಿವತ್ತ ನ್ಯಾಯಮೂರ್ತಿಗಳೊಬ್ಬರ ನೇತೃತ್ವದ ಸಮಿತಿ ರಚಿಸುವಂತೆ ಕೋರಿ ಕಂಪೆನಿ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದರು.

ಈ ಕುರಿತಂತೆ ಯುಬಿಎಚ್‌ಎಲ್ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಹಾಗೂ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕಂಪೆನಿ ಪರ ಹಿರಿಯ ವಕೀಲ ಸಜನ್ ಪೂವಯ್ಯ, ಈ ಪ್ರಕರಣದಲ್ಲಿ ಕಂಪೆನಿಯ ಮಾಲಕರ ವಿರುದ್ಧ ಪ್ರಾಸಿಕ್ಯೂಷನ್ ಪ್ರಕರಣ ದಾಖಲಿಸಿದೆಯೇ ಹೊರತು ಕಂಪೆನಿಯ ಮೇಲಲ್ಲ ಎಂದರು.

ಜಾರಿ ನಿರ್ದೇಶನಾಲಯವು ಕಂಪೆನಿಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಕಂಪೆನಿಯ ಮಾಲಕರು ಇಂಗ್ಲೆಂಡ್‌ನಲ್ಲಿದ್ದು ಅವರನ್ನು ಘೋಷಿತ ಅಪರಾಧಿ ಎಂದು ಸಾರಲಾಗಿದೆ. ಏತನ್ಮಧ್ಯೆ ಕಂಪೆನಿಯ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ. ಹೀಗಿರುವಾಗ ಕಂಪೆನಿಯನ್ನೇಕೆ ಶಿಕ್ಷೆಗೆ ಗುರಿಪಡಿಸುತ್ತಿದ್ದೀರಿ ಎಂದರು.

ಷೇರು ಮಾರಾಟ ಮಾಡಿ ಸಾಲ ತೀರಿಸಲು ನಾವು ಸಿದ್ಧರಿದ್ದು, ಈ ಹೈಕೋರ್ಟ್‌ಗೆ ಸಹಕರಿಸಲು ಸಿದ್ಧರಿದ್ದೇವೆ. ಹಣ ಲೇವಾದೇವಿ ಕಾಯ್ದೆ ಪ್ರಕಾರ ಷೇರುಗಳ ಮಾರಾಟ ಮಾಡಲು ಅವಕಾಶವಿದೆ ಎಂದರು.

ವಿಚಾರಣೆ ಆಲಿಸಿದ ನ್ಯಾಯಪೀಠ, ಈ ಹಂತದಲ್ಲಿ ಷೇರುಗಳ ಮಾರಾಟಕ್ಕೆ ಹೈಕೋರ್ಟ್ ಅನುಮತಿ ನೀಡಬಹುದೇ ಹೇಗೆ ಎಂಬುದರ ಬಗ್ಗೆ ಕಾನೂನಿನ ತಾಂತ್ರಿಕ ಅಂಶಗಳ ಮೇಲೆ ಸ್ಪಷ್ಟನೆ ನೀಡುವಂತೆ ಜಾರಿ ನಿರ್ದೇಶನಾಲಯ ಹಾಗೂ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಅ. 1ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News