ಎಡಗೈ ವೇಗದ ಬೌಲರ್ ಅಹ್ಮದ್ ಏಕದಿನಕ್ಕೆ ಪಾದಾರ್ಪಣೆ

Update: 2018-09-18 18:33 GMT

ದುಬೈ, ಸೆ.18: ಭಾರತದ ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಹಾಂಕಾಂಗ್ ವಿರುದ್ಧ ಏಶ್ಯಕಪ್ ಪಂದ್ಯದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದಾರೆ. ಮಂಗಳವಾರ ಭಾರತದ ನಾಯಕ ರೋಹಿತ್ ಶರ್ಮಾ ಅವರು ಅಹ್ಮದ್‌ಗೆ ಕ್ಯಾಪ್ ಹಸ್ತಾಂತರಿಸಿ ಆಡುವ ಬಳಗಕ್ಕೆ ಸ್ವಾಗತಿಸಿದರು.

20ರ ಹರೆಯದ ರಾಜಸ್ಥಾನದ ವೇಗದ ಬೌಲರ್ ಅಹ್ಮದ್ ಏಶ್ಯಕಪ್ ಟೂರ್ನಮೆಂಟ್‌ಗೆ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು.

ಏಶ್ಯಕಪ್‌ಗೆ ತಂಡವನ್ನು ಘೋಷಿಸಿದ ಸಂದರ್ಭದಲ್ಲಿ ಮಾತನಾಡಿದ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್,‘‘ಇನ್ನು 2-3 ಸ್ಥಾನ ಭರ್ತಿ ಮಾಡಲು ಬಾಕಿ ಇದೆ. ಅದರಲ್ಲಿ ಎಡಗೈ ವೇಗದ ಬೌಲರ್ ಸ್ಥಾನವೂ ಒಂದು. ಈ ಸ್ಥಾನವನ್ನು ಖಲೀಲ್ ತುಂಬಲಿದ್ದಾರೆ’’ ಎಂದು ಹೇಳಿದ್ದರು.

 ರಾಹುಲ್ ದ್ರಾವಿಡ್ ಕೋಚಿಂಗ್‌ನಲ್ಲಿ ಪಳಗಿರುವ ಖಲೀಲ್ ಕೊಲಂಬೊದಲ್ಲಿ ನಡೆದ ತ್ರಿ-ರಾಷ್ಟ್ರ ಅಂಡರ್-19 ಟೂರ್ನಮೆಂಟ್‌ನಲ್ಲಿ ಒಟ್ಟು 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಶ್ರೀಲಂಕಾ ವಿರುದ್ಧ 29ಕ್ಕೆ 3 ವಿಕೆಟ್ ಕೂಡ ಸೇರಿದೆ. ಖಲೀಲ್ ಐಪಿಎಲ್‌ನಲ್ಲಿ ಆಡದಿದ್ದರೂ 2016ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ 10 ಲಕ್ಷ ರೂ. ನೀಡಿ ಖರೀದಿಸಿತ್ತು.

ಸೈಯದ್ ಮುಶ್ತಾಕ್ ಅಲಿ ಟೂರ್ನಮೆಂಟ್‌ನಲ್ಲಿ ಖಲೀಲ್ 6.76 ಇಕಾನಮಿ ರೇಟ್‌ನಲ್ಲಿ ಒಟ್ಟು 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಚಾಂಪಿಯನ್ ದಿಲ್ಲಿ ವಿರುದ್ದ ಫೈನಲ್‌ನಲ್ಲಿ 23ಕ್ಕೆ 2 ವಿಕೆಟ್ ಸೇರಿದೆ. ದೇಶೀಯ ಕ್ರಿಕೆಟ್‌ನಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ ಖಲೀಲ್ ಜೂನ್-ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ‘ಎ’ ತಂಡದಲ್ಲಿ ಹಾಗೂ ಆಗಸ್ಟ್ ನಲ್ಲಿ ನಡೆದ ಚತುಷ್ಕೋನ ಸರಣಿಯಲ್ಲಿ ಸ್ಥಾನ ಪಡೆದಿದ್ದರು. ಭಾರತದ ನಾಯಕ ರೋಹಿತ್ ಶರ್ಮಾ ಹಾಂಕಾಂಗ್ ವಿರುದ್ಧ ಏಶ್ಯಕಪ್‌ನ ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯರನ್ನು ಹೊರಗಿಟ್ಟಿದ್ದಾರೆ. ಅಂಬಟಿ ರಾಯುಡು, ದಿನೇಶ್ ಕಾರ್ತಿಕ್ ಹಾಗೂ ಕೇದಾರ್ ಜಾಧವ್‌ಗೆ ಅವಕಾಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News