ಅಮೆಝಾನ್ ನಲ್ಲಿ ಗೋಮೂತ್ರ, ಸೆಗಣಿಯ ಸಾಬೂನು ಮಾರಲಿರುವ ಆರೆಸ್ಸೆಸ್ ಬೆಂಬಲಿತ ಸಂಸ್ಥೆ !

Update: 2018-09-19 07:20 GMT

ಆಗ್ರಾ, ಸೆ. 19: ಮಥುರಾದಲ್ಲಿ ಆರೆಸ್ಸೆಸ್ ನಡೆಸುತ್ತಿರುವ ದೀನ್ ದಯಾಲ್ ಧಾಮ್ ಇಲ್ಲಿ ತಯಾರಿಸಲಾಗುವ ಹಲವಾರು ನೈಸರ್ಗಿಕ ಪ್ರಸಾಧನಗಳು ಹಾಗೂ ಉತ್ಪನ್ನಗಳು ಮುಂದಿನ ತಿಂಗಳು ಇ-ಕಾಮರ್ಸ್ ಸೈಟ್ ಅಮೆಝಾನ್ ನಲ್ಲಿ ಲಭ್ಯವಾಗಲಿವೆ.

ತಮ್ಮ ಸಂಸ್ಥೆಯಲ್ಲಿ ತಯಾರಿಸಲಾಗುವ ಸಾಬೂನುಗಳು, ಫೇಸ್ ಪ್ಯಾಕುಗಳು, ಅಗರಬತ್ತಿಗಳಲ್ಲಿ ಗೋಮೂತ್ರ ಹಾಗೂ ಗೋಮಯ (ಸೆಗಣಿ)  ಮುಖ್ಯ ವಸ್ತುವನ್ನಾಗಿ ಉಪಯೋಗಿಸಲಾಗುತ್ತಿದ್ದು ಯಾವುದೇ ಕೃತಕ ರಾಸಾಯನಿಕಗಳನ್ನು ಉಪಯೋಗಿಸಲಾಗುವುದಿಲ್ಲ ಎಂದು  ಕೇಂದ್ರದ ಉಪ ಕಾರ್ಯದರ್ಶಿ ಮನೀಶ್ ಗುಪ್ತಾ ಹೇಳುತ್ತಾರೆ. ತಮ್ಮ ಗೋಶಾಲೆಯಲ್ಲಿರುವ ದನಗಳ ಮೂತ್ರ ಹಾಗೂ ಸೆಗಣಿಯನ್ನು ಸಂಗ್ರಹಿಸಿ ಈ ಉತ್ಪನ್ನಗಳನ್ನು ತಯಾರಿಸಲು ಉಪಯೋಗಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸೌಂದರ್ಯ ಸಾಧನಗಳ ಹೊರತಾಗಿ ಮೋದಿ ಮತ್ತು ಯೋಗಿ ಕುರ್ತಾಗಳೂ ಲಭ್ಯವಾಗಲಿವೆ. ಆರಂಭದಲ್ಲಿ  ಕಾಮಧೇನು ಅರ್ಕ್ ಸಹಿತ 30 ಉತ್ಪನ್ನಗಳು ಆನ್‍ಲೈನ್ ಮೂಲಕ ಲಭ್ಯವಾಗಲಿದ್ದು, ಮೋದಿ, ಯೋಗಿ ಕುರ್ತಾ ಸೇರಿದಂತೆ ಹತ್ತು ವಿಧದ ಬಟ್ಟೆಗಳನ್ನೂ ಮಾರಾಟ ಮಾಡಲಾಗುವುದು. ಸ್ಥಳೀಯರಿಗೆ ಉದ್ಯೋಗವೊದಗಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಆನ್ಲೈನ್ ಮೂಲಕ ಹೆಚ್ಚಿನ ಮಾರಾಟವಾದರೆ   ಹೆಚ್ಚು ಉತ್ಪಾದನೆಯಿಂದ ಹೆಚ್ಚು ಜನರಿಗೆ ಉದ್ಯೋಗ ದೊರೆಯುವುದೆಂದು  ಆರೆಸ್ಸೆಸ್ ವಕ್ತಾರ ಅರುಣ್ ಕುಮಾರ್ ಹೇಳುತ್ತಾರೆ. ಪ್ರಸ್ತುತ ಈ ಕೇಂದ್ರ ಪ್ರತಿ ತಿಂಗಳು ರೂ 1 ಲಕ್ಷ ಮೌಲ್ಯದ ಉತ್ಪನ್ನಗಳು ಹಾಗೂ 3 ಲಕ್ಷ ರೂ. ಮೌಲ್ಯದ ಬಟ್ಟೆಗಳನ್ನು ಮಾರಾಟ ಮಾಡುತ್ತಿದೆ.

ದೀನ್ ದಯಾಳ್ ಧಾಮದ ಕಾಮಧೇನು ಗೋಶಾಲಾ ಫಾರ್ಮೀಸಿಯಲ್ಲಿ ಘನ್ವತಿ ಟಾನಿಕ್, ಮಧುಮೇಹಿಗಳಿಗಾಗಿ ಕಾಮಧೇನು ಮಧುನಾಶಕ್ ಚುರ್, ನೋವು ಮತ್ತು ಸಂಧಿವಾತಕ್ಕೆ ಶೋಲಹರ್ ತೈಲ, ಶಾಂಪೂ, ಟೂತ್ ಪೇಸ್ಟ್ ಮುಂತಾದ ಉತ್ಪನ್ನಗಳು ತಯಾರಾಗುತ್ತವೆ.

ಯೋಗಿ ಕುರ್ತಾಗಳು ಕೇಸರಿ ಬಣ್ಣದ್ದಾಗಿದ್ದರೆ ಮೋದಿ ಕುರ್ತಾಗಳು ಬಿಳಿ, ಬೂದು ಮತ್ತು ಗುಲಾಬಿ ಬಣ್ಣಗಳಲ್ಲಿ ಲಭ್ಯವಿದೆ ಎಂದು ಧಾಮದ ನಿರ್ದೇಶಕ ರಾಜೇಂದ್ರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News