ಹೋರಾಟಗಾರರು ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿದ್ದರು ಎನ್ನುವುದಕ್ಕೆ ಒಂದು ದಾಖಲೆ ತೋರಿಸಿ: ಸುಪ್ರೀಂ ಕೋರ್ಟ್

Update: 2018-09-19 17:12 GMT

ಹೊಸದಿಲ್ಲಿ, ಸೆ. 19: ಊಹೆಯ ಆಧಾರದಲ್ಲಿ ವ್ಯಕ್ತಿಯೊಬ್ಬನ ಸ್ವಾತಂತ್ರ್ಯವನ್ನು ಬಲಿಕೊಡಲು ಸಾಧ್ಯವಿಲ್ಲ ಎಂದು ಬುಧವಾರ ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್, ಆಗಸ್ಟ್ 28ರಂದು ಐವರು ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಿರುವುದನ್ನು ಸಮರ್ಥಿಸಲು ಕನಿಷ್ಠ ಒಂದು ಪ್ರಮಾಣೀಕೃತ ದಾಖಲೆಗಳನ್ನು ಹಾಜರುಪಡಿಸಿ ಎಂದು ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶಿಸಿದೆ.

ಮಹಾರಾಷ್ಟ್ರ ಸರಕಾರ ಮುಚ್ಚಿದ ಲಕೋಟೆಯಲ್ಲಿ ನೀಡಿದ ದಾಖಲೆಗಳು ಹಾಗೂ ಕೇಸ್ ಡೈರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ (ಸಿಜೆಐ), ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಮಾನವ ಹಕ್ಕು ಹೋರಾಟಗಾರರು ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಪ್ರಮಾಣೀಕೃತ ದಾಖಲೆಗಳನ್ನು ಸಲ್ಲಿಸಿ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು. ಕೇಸ್ ಡೈರಿ ಸ್ವವಿವರಣಾತ್ಮಕ ಎಂದು ಎಎಸ್‌ಜಿ ನ್ಯಾಯಾಲಯಕ್ಕೆ ತಿಳಿಸಿದರು. ಆಗ ಸಿಜೆಐ, ನಿಮ್ಮ ಒಂದೇ ಒಂದು ಉತ್ತಮ ದಾಖಲೆಯನ್ನು ನಮಗೆ ತೋರಿಸಿ ಎಂದು ಎಎಸ್‌ಜಿಗೆ ಹೇಳಿದರು.

ಐವರು ಮಾನವ ಹಕ್ಕು ಹೋರಾಟಗಾರರ ಬಂಧನವನ್ನು ಪ್ರಶ್ನಿಸಿ ಡಾ. ರೋಮಿಲಾ ಥಾಪರ್ ಹಾಗೂ ಇತರರು ಸಲ್ಲಿಸಿದ ಮನವಿಯನ್ನು ಪೀಠ ವಿಚಾರಣೆ ನಡೆಸಿತು.

ಪೊಲೀಸರು ವಶಪಡಿಸಿಕೊಂಡ ಫೋನ್, ಲ್ಯಾಪ್‌ಟಾಪ್‌ನಂತಹ ಇಲೆಕ್ಟ್ರಾನಿಕ್ಸ್ ದಾಖಲೆಗಳನ್ನು ಎಎಸ್‌ಜಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಅದನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಈ ಬಗ್ಗೆ ಪ್ರತಿಯೊಂದು ವಿಚಾರವನ್ನು ಕೇಸ್ ಡೈರಿಯಲ್ಲಿ ದಾಖಲಿಸಲಾಗಿತ್ತು. ‘‘ನಾವು ಕೆಲವರ ಬಗ್ಗೆ ಆರೋಪ ಪಟ್ಟಿ ರೂಪಿಸಿದ್ದೇವೆ ಎಂದು ಹೇಗೆ ಹೇಳಲು ಸಾಧ್ಯ ? ಬಂಧನವನ್ನು ಸಮರ್ಥಿಸಿಕೊಳ್ಳಲು ಪ್ರಮಾಣೀಕೃತ ದಾಖಲೆಗಳನ್ನು ನಾವು ಕಂಡುಕೊಂಡಿದ್ದೇವೆ’’ ಎಂದು ಎಎಸ್‌ಜಿ ತಿಳಿಸಿದರು.

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಬಂಧಿತ ಮಾನವ ಹಕ್ಕು ಹೋರಾಟಗಾರರ ಪ್ರಕರಣವನ್ನು ನ್ಯಾಯಾಲಯ ಹದ್ದಿನ ಕಣ್ಣಿನಿಂದ ನೋಡಿದೆ. ಭಿನ್ನಾಬಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ನಮ್ಮಲ್ಲಿ ಸಂಸ್ಥೆಗಳು ಸಾಕಷ್ಟು ಸುದೃಢವಾಗಿದೆ. ಒಂದೆರೆಡು ದಾಖಲೆಗಳ ಮೂಲಕ ನಾವು ಮುಂದುವರಿಯಲು ಸಾಧ್ಯವಿಲ್ಲ. ನ್ಯಾಯಾಲಯ ಮನವಿ ಸ್ವೀಕರಿಸುವುದಕ್ಕೆ ನೀವು ವಿರೋಧ ವ್ಯಕ್ತಪಡಿಸಬೇಡಿ ಎಂದು ನ್ಯಾಯಮೂರ್ತಿ ಚಂದ್ರಚೂಡ ಹೇಳಿದ್ದಾರೆ.

ಆಗಸ್ಟ್ 28ರಂದು ದೇಶದ ವಿವಿಧ ಭಾಗಗಳಿಂದ ಐವರು ಮಾನವ ಹಕ್ಕು ಹೋರಾಟಗಾರರಾಗಿರುವ ವರವರ ರಾವ್, ಸುಧಾ ಭಾರದ್ವಾಜ್, ಅರುಣ್ ಫೆರೇರಾ, ವೆರ್ನನ್ ಗೊನ್ಸಾಲ್ವೆಸ್ ಹಾಗೂ ಗೌತಮ್ ನೌಲಾಖಾ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಮರು ದಿನ ಸುಪ್ರೀಂ ಕೋರ್ಟ್ ಬಂಧಿತ ಮಾನವ ಹಕ್ಕು ಹೋರಾಟಗಾರರನ್ನು ಗೃಹ ಬಂಧನದಲ್ಲಿ ಇರಿಸುವಂತೆ ಆದೇಶಿಸಿತ್ತು. ಅನಂತರ ಗೃಹ ಬಂಧನದ ಅವಧಿಯನ್ನು ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News