ನಿಧನದ ರಾತ್ರಿ ನ್ಯಾ.ಲೋಯಾ ಜೊತೆ ಉಳಿದುಕೊಂಡಿದ್ದ ಇಬ್ಬರಿಗೆ ಹೈಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿಗೆ ಶಿಫಾರಸು

Update: 2018-09-19 12:53 GMT

ನಾಲ್ವರು ನ್ಯಾಯಾಧೀಶರನ್ನು ಬಾಂಬೆ ಉಚ್ಚನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಪದೋನ್ನತಿಗೆ ಶಿಫಾರಸು ಮಾಡಿ ನಿರ್ಣಯವೊಂದನ್ನು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಸೆ.11ರಂದು ಅಂಗೀಕರಿಸಿದೆ. ಈ ಪೈಕಿ ಇಬ್ಬರು ನ್ಯಾಯಾಧೀಶರಾದ ಎಸ್.ಎಂ.ಮೋದಕ್ ಮತ್ತು ವಿ.ಜಿ.ಜೋಶಿ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮುಖ್ಯ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾ.ಬಿ.ಎಚ್.ಲೋಯಾ ಅವರ ನಿಗೂಢ ಸಾವಿನ ಸಂಂದರ್ಭದಲ್ಲಿ ಪ್ರತ್ಯೇಕ ರೀತಿಗಳಲ್ಲಿ ಗುರುತಿಸಿಕೊಂಡಿದ್ದರು.

2014,ನ.30ರಂದು ರಾತ್ರಿ ನಾಗ್ಪುರದಲ್ಲಿಯ ಸರಕಾರಿ ಅತಿಥಿಗೃಹ ರವಿಭವನದಲ್ಲಿ ಲೋಯಾ ಅವರೊಂದಿಗೆ ತಾನು ಉಳಿದುಕೊಂಡಿದ್ದೆ ಎಂದು ಮೋದಕ್ ಹೇಳಿದ್ದರು. ಸಹೋದ್ಯೋಗಿ ನ್ಯಾಯಾಧೀಶರ ಪುತ್ರನ ಮದುವೆಗಾಗಿ ಲೋಯಾ ಅವರು ನಾಗ್ಪುರದಲ್ಲಿದ್ದರು ಎಂದು ಅವರ ಸಾವಿನ ಕುರಿತ ಅಧಿಕೃತ ದಾಖಲೆಯಲ್ಲಿ ಹೇಳಲಾಗಿದೆ. ಆದರೆ 2014,ನ.27ರ ಮಹಾರಾಷ್ಟ್ರ ಕಾನೂನು ಇಲಾಖೆಯ ನಾಗ್ಪುರ ಕಚೇರಿಯ ಸರಕಾರಿ ಪತ್ರದಂತೆ ಜೋಶಿ ಮತ್ತು ಮೋದಕ್ ಅವರು ಸರಕಾರದ ಕೆಲಸಕ್ಕಾಗಿ ನ.30ರ ಬೆಳಿಗ್ಗೆಯಿಂದ ಡಿ.1ರ ಬೆಳಿಗ್ಗೆ 7:30ರವರೆಗೆ ರವಿಭವನದಲ್ಲಿ ಉಳಿದುಕೊಳ್ಳಲಿದ್ದರು.

ಬಾಂಬೆ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶೆ ಮಂಜುಳಾ ಚೆಲ್ಲೂರ್ ಅವರು ಮೋದಕ್ ಸೇರಿದಂತೆ ನಾಲ್ವರು ನ್ಯಾಯಾಧೀಶರ ಪದೋನ್ನತಿಗಾಗಿ 2017,ನ.28ರಂದು ಕೊಲಿಜಿಯಮ್‌ಗೆ ಶಿಫಾರಸು ಮಾಡಿದ್ದರು. ಕುತೂಹಲದ ವಿಷಯವೆಂದರೆ ಮಹಾರಾಷ್ಟ್ರ ರಾಜ್ಯ ಗುಪ್ತಚರ ಇಲಾಖೆ(ಎಸ್‌ಐಡಿ)ಯು ಅದೇ ದಿನ ತನ್ನ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು. ಲೋಯಾರದು ಸಹಜ ಸಾವು ಎಂದು ಅದು ತನ್ನ ವರದಿಯಲ್ಲಿ ನಿರ್ಣಯಿಸಿತ್ತು.

 ಎಸ್‌ಐಡಿ ತನ್ನ ವರದಿ ಸಲ್ಲಿಸುವುದಕ್ಕೆ ಒಂದು ವಾರ ಮೊದಲು ಲೋಯಾರ ಸಾವಿನ ಸುತ್ತಲಿನ ನಿಗೂಢತೆಯ ಬಗ್ಗೆ ಅವರ ಕುಟುಂಬವು ವ್ಯಕ್ತಪಡಿಸಿದ್ದ ಶಂಕೆ ಮತ್ತು ಬಾಂಬೆ ಉಚ್ಚ ನ್ಯಾಯಾಲಯದ ಇನ್ನೋರ್ವ ಮಾಜಿ ಮುಖ್ಯ ನ್ಯಾಯಾಧೀಶ ಮೋಹಿತ್ ಶಾ ಅವರು ಸೊಹ್ರಾಬುದ್ದೀನ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ತೀರ್ಪು ಹೊರಡಿಸಲು ಲೋಯಾರಿಗೆ 100 ಕೋ.ರೂ.ಗಳ ನೀಡುವ ಆಮಿಷವನ್ನೊಡ್ಡಿದ್ದರು ಎಂಬ ಕುಟುಂಬದ ಆರೋಪಕ್ಕೆ ಸಂಬಂಧಿಸಿದಂತೆ ಎರಡು ವರದಿಗಳನ್ನು ಕಾರವಾನ್ ನಿಯತಕಾಲಿಕವು ಪ್ರಕಟಿಸಿತ್ತು. ಮೋದಕ್ ಅವರು ಎಸ್‌ಐಡಿಯ ವರದಿಯ ಮತ್ತು ಚೆಲ್ಲೂರ್ ಅವರ ಶಿಫಾರಸಿನ ದಿನಾಂಕಗಳ ನಾಲ್ಕು ದಿನಗಳ ಮೊದಲು ತನ್ನ ಹೇಳಿಕೆಯನ್ನು ಎಸ್‌ಐಡಿಗೆ ಸಲ್ಲಿಸಿದ್ದರು.

ಕೊಲಿಜಿಯಂ ನಿರ್ಣಯದ ಪುನರ್‌ಪರಿಶೀಲನೆಯನ್ನು ಕೋರಿ ನಾಗ್ಪುರದ ವಕೀಲ ಆರ್.ಪಿ.ಜೋಶಿ ಅವರು ಸೆ.17ರಂದು ಅ.3ರಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ರಂಜನ ಗೊಗೊಯ್ ಅವರಿಗೆ ಲಿಖಿತ ದೂರನ್ನು ಸಲ್ಲಿಸಿದ್ದರು. ಅದಕ್ಕೂ ಮುನ್ನ ಅವರು ಮು.ನ್ಯಾ.ದೀಪಕ್ ಮಿಶ್ರಾ,ಬಾಂಬೆ ಉಚ್ಛ ನ್ಯಾಯಾಲಯ ಮತ್ತು ಕೇಂದ್ರ ಕಾನೂನು ಸಚಿವರಿಗೂ ಹಲವಾರು ದೂರುಗಳನ್ನು ಸಲ್ಲಿಸಿದ್ದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ನ್ಯಾ.ಲೋಯಾ ಅವರ ದಿಢೀರ್ ಸಾವಿನ ಪ್ರಕರಣದಲ್ಲಿ ಕೆಲವು ಹೇಳಿಕೆಗಳನು ನೀಡಿದ್ದಕ್ಕಾಗಿ ಮೋದಕ್ ಅವರಿಗೆ ಪದೋನ್ನತಿಯ ರೂಪದಲ್ಲಿ ಪುರಸ್ಕರಿಸುತ್ತಿರುವಂತಹ ಭಾವನೆಯು ಉಂಟಾಗಿದೆ ಎಂದು ವಕೀಲ ಜೋಶಿ ಅವರು ನ್ಯಾ.ಗೊಗೊಯ್‌ಗೆ ಸಲ್ಲಿಸಿದ್ದ ದೂರಿನಲ್ಲಿ ತಿಳಿಸಿದ್ದರು.

ಕೊಲಿಜಿಯಂ ಕೆಲವು ನ್ಯಾಯಾಧೀಶರ ವಿರುದ್ಧ ಬಂದಿದ್ದ ದೂರುಗಳಲ್ಲಿ ಯಾವುದೇ ತಿರುಳಿಲ್ಲ ಎಂದು ಅವುಗಳನ್ನು ತಿರಸ್ಕರಿಸಿತ್ತು. ಎಸ್‌ಐಡಿಗೆ ಮೋದಕ್ ನೀಡಿರುವ ಹೇಳಿಕೆಯಲ್ಲಿ ಲೋಯಾರ ಸಾವಿನ ಬೆನ್ನ ಹಿಂದೆಯೇ ನಡೆದಿದ್ದ ಹಲವಾರು ಘಟನೆಗಳು ಬಿಟ್ಟುಹೋಗಿವೆ. ಲೋಯಾ ಅವರೊಂದಿಗೆ ತಾನು ಮತ್ತು ಇನ್ನೋರ್ವ ನ್ಯಾಯಾಧೀಶ ಶ್ರೀಕಾಂತ ಕುಲಕರ್ಣಿ ನ.29ರಂದು ರಾತ್ರಿ ಮುಂಬೈನಿಂದ ನಾಗ್ಪುರಕ್ಕೆ ಪ್ರಯಾಣಿಸಿದ್ದು,ಮರುದಿನ ಮೂವರೂ ರವಿಭವನದಲ್ಲಿ ಒಂದೇ ಕೋಣೆಯಲ್ಲಿ ಉಳಿದುಕೊಂಡಿದ್ದೆವು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು. ಅಸ್ವಸ್ಥತೆ ಕಾಣಿಸಿಕೊಂಡಿದ್ದರಿಂದ ಲೋಯಾ ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಎದ್ದಿದ್ದರು ಎಂದು ತಿಳಿಸಿರುವ ಮೋದಕ್,ಅಸ್ವಸ್ಥತೆಯ ಸ್ವರೂಪವನ್ನು ಬಣ್ಣಿಸಿಲ್ಲ. ತಾನು ಮತ್ತು ಕುಲಕರ್ಣಿ ಸ್ಥಳೀಯ ನ್ಯಾಯಾಧೀಶರನ್ನು ಕರೆಸಿಕೊಂಡು ಲೋಯಾರನ್ನು ದಾಂಡೆ ಅಸ್ಪತ್ರೆಗೆ ಸಾಗಿಸಿದ್ದೆವು. ಅಲ್ಲಿಯ ವೈದ್ಯರ ಸಲಹೆಯ ಮೇರೆ ಗೆ ಇನ್ನೊಂದು ಆಸ್ಪತ್ರೆಗೆ ದಾಖಲಿಸಿದ್ದೆವು ಎಂದೂ ತಿಳಿಸಿರುವ ಲೋಯಾ,ತಾವು ಕರೆಸಿದ್ದು ಓರ್ವ ಸ್ಥಳೀಯ ನ್ಯಾಯಾಧೀಶರನ್ನೋ ಅಥವಾ ಇಬ್ಬರನ್ನೋ ಎನ್ನುವುದು ನೆನಪಿಲ್ಲ. ಆ ಇನ್ನೊಂದು ಆಸ್ಪತ್ರೆಯ ಹೆಸರೂ ನೆನಪಿಲ್ಲ ಮತ್ತು ಲೋಯಾರ ಕುಟುಂಬಕ್ಕೆ ಯಾರು ಮಾಹಿತಿ ನೀಡಿದ್ದರು ಎನ್ನುವುದೂ ನೆನಪಿಲ್ಲ ಎಂದಿದ್ದಾರೆ. ಲೋಯಾರ ನಿಧನವನ್ನು ವೈದ್ಯರು ಯಾವಾಗ ಪ್ರಕಟಿಸಿದ್ದರು ಎನ್ನುವುದನ್ನೂ ಅವರು ತಿಳಿಸಿಲ್ಲ.

ಲೋಯಾರ ಸಾವಿನ ಸಂದರ್ಭದ ಕುರಿತು ಅವರ ಕುಟುಂಬವು ಎತ್ತಿದ್ದ ಪ್ರಮುಖ ಪ್ರಶ್ನೆಗಳು ಮೋದಕ್ ಹೇಳಿಕೆಯಲ್ಲಿಲ್ಲ. ದಾಂಡೆಯ ಬಳಿಕ ಲೋಯಾರನ್ನು ದಾಖಲಿಸಲಾಗಿದ್ದ ಮೆಡಿಟ್ರಿನಾ ಆಸ್ಪತ್ರೆಯ ದಾಖಲೆಗಳು ಅವರು ಬೆಳಿಗ್ಗೆ 6:15ಕ್ಕೆ ನಿಧನರಾಗಿದ್ದರು ಎಂದು ಹೇಳುತ್ತಿವೆ, ಆದರೆ ತಮಗೆ ಐದು ಗಂಟೆಯಿದಲೇ ಸಾವಿನ ಬಗ್ಗೆ ಕರೆಗಳು ಬರತೊಡಗಿದ್ದವು ಎಂದು ಕುಟುಂಬ ಸದಸ್ಯರು ಹೇಳಿದ್ದರು. ದಾಂಡೆ ಆಸ್ಪತ್ರೆಯಲ್ಲಿ ನಡೆಸಲಾಗಿದ್ದ ಲೋಯಾರ ಇಸಿಜಿ ತಪಾಸಣೆಯ ದಾಖಲೆ ಲೋಯಾ ಅವರು ಹೃದಯಾಘಾತದಿಂದ ನಿಧನರಾಗಿದ್ದರು ಎಂಬ ಅಧಿಕೃತ ಹೇಳಿಕೆಯನ್ನು ಬೆಂಬಲಿಸುವ ಪ್ರಮುಖ ಸಾಕ್ಷವಾಗಿದೆ ಮತ್ತು ಅವರ ಸಾವಿನ ಕುರಿತು ವಿಚಾರಣೆಯ ಕೋರಿಕೆಗಳನ್ನು ತಿರಸ್ಕರಿಸಲು ಸರ್ವೋಚ್ಚ ನ್ಯಾಯಾಲಯವೂ ಇದನ್ನೇ ನೆಚ್ಚಿಕೊಂಡಿತ್ತು. ಆದರೆ ಮೋದಕ್ ಅವರ ಹೇಳಿಕೆಯಲ್ಲಿ ಇಸಿಜಿ ಅಥವಾ ಹೃದಯಾಘಾತದ ಬಗ್ಗೆ ಚಕಾರವಿಲ್ಲ.

ವಾಸ್ತವದಲ್ಲಿ ಮೋದಕ್ ಹೇಳಿಕೆ ಲೋಯಾ ಸಾವಿಗೆ ಕಾರಣವಾಗಿದ್ದ ಘಟನೆಗಳ ಕುರಿತು ಇನ್ನಷ್ಟು ಪ್ರಶ್ನೆಗಳನ್ನೆತ್ತಿದೆ. ಇವುಗಳಲ್ಲಿ ಮುಖ್ಯವಾದದು ತಾವು ಮೂವರೂ ನ್ಯಾಯಾಧೀಶರು ರವಿಭವನದಲ್ಲಿ ಒಂದೇ ಕೋಣೆಯಲ್ಲಿ ಉಳಿದುಕೊಂಡಿದ್ದೆವು ಎನ್ನುವುದು.ಅತಿಥ ಗೃಹದ ದಾಖಲೆ ಪುಸ್ತಕದಲ್ಲಿ ಲೋಯಾರ ಹೆಸರು ಇರಲಿಲ್ಲ ಮತ್ತು ಕೋಣೆಯು ಕುಲಕರ್ಣಿಯವರ ಹೆಸರಿನಲ್ಲಿತ್ತು. ಈ ಮೂವರೂ ಡಿ.1ರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಅಲ್ಲಿಂದ ಹೊರಟಿದ್ದರು. ಆದರೆ ಅತಿಥ ಗೃಹದ ಸಿಬ್ಬಂದಿಗಳಿಗೆ ಲೋಯಾ ಅವರಿಗೆ ಗಂಭೀರ ಅನಾರೋಗ್ಯವಾಗಿದೆ,ಅವರನ್ನು ಆಸ್ಪತ್ರೆಗೆ ಕರದೊಯ್ಯಲಾಗಿದೆ ಮತ್ತು ಅಲ್ಲಿ ಅವರು ನಿಧನರಾಗಿದ್ದಾರೆ ಎನ್ನುವುದು ಗೊತ್ತಿರಲಿಲ್ಲ.

ರವಿಭವನದ ಕೋಣೆಗಳಲ್ಲಿ ಎರಡೇ ಬೆಡ್‌ಗಳಿದ್ದು,ಅಂದಿನ ರಾತ್ರಿ ಈ ಮೂವರೂ ತಂಗಿದ್ದ ಕೋಣೆಯಿಂದ ಹೆಚ್ಚುವರಿ ಬೆಡ್‌ಗಾಗಿ ಬೇಡಿಕೆ ಬಂದಿರಲಿಲ್ಲ. ಗಣ್ಯ ವ್ಯಕ್ತಿಗಳಾಗಿದ್ದರೂ ಇನ್ನೊಂದು ಕೋಣೆಯನ್ನೂ ಪಡೆದಿರಲಿಲ್ಲ ಎನ್ನುವುದೂ ಅಚ್ಚರಿ ಮೂಡಿಸಿದೆ.

ಲೋಯಾ ಪ್ರಕರಣದೊಂದಿಗೆ ಚೆಲ್ಲೂರ್ ಹೆಸರೂ ಗುರುತಿಸಿಕೊಂಡಿದೆ. 2017,ನ.29ರ ಆಂಗ್ಲ ಪತ್ರಿಕೆಯ ವರದಿಯಂತೆ ಲೋಯಾರ ಪುತ್ರ ಅನುಜ ಲೋಯಾ ಅವರು ಆಗ ಬಾಂಬೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ ಚೆಲ್ಲೂರ್ ಅವರನ್ನು ಭೇಟಿಯಾಗಿ ತನ್ನ ತಂದೆಯ ಸಾವಿನ ಬಗ್ಗೆ ಕುಟುಂಬಕ್ಕೆ ಯಾವುದೇ ಶಂಕೆಯಿಲ್ಲ ಎಂದು ತಿಳಿಸಿದ್ದರು. ಈ ಬಗ್ಗೆ ಅವರು ಚೆಲ್ಲ್ಲೂರ್ ಅವರಿಗೆ ಪತ್ರವೊಂದನ್ನೂ ಸಲ್ಲಿಸಿದ್ದರೆಂದು ವರದಿಯು ಹೇಳಿದೆ. ಅನುಜ್ ಭೇಟಿ ವರದಿಯಾದ ನಾಲ್ಕು ದಿನಗಳ ಬಳಿಕ ಮತ್ತು ಕೊಲಿಜಿಯಮ್‌ಗೆ ತನ್ನ ಶಿಫಾರಸಿನ ಆರು ದಿನಗಳ ಬಳಿಕ ಅಂದರೆ ಡಿ.4ರಂದು ಚೆಲ್ಲೂರ ಸೇವೆಯಿಂದ ನಿವೃತ್ತರಾಗಿದ್ದರು.

ಲೋಯಾ ಸಾವಿನ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ಅರ್ಜಿದಾರರಲ್ಲೋರ್ವರ ಪರ ವಾದಿಸುತ್ತಿದ್ದ ಹಿರಿಯ ನ್ಯಾಯವಾದಿ ದುಷ್ಯಂತ ದವೆ ಅವರು,ಈ ಸಂಬಂಧ ಚೆಲ್ಲೂರ್ ನಡವಳಿಕೆಯನ್ನು ಪ್ರಶ್ನಿಸಿದ್ದರು. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಲೋಧಾರ ಪುತ್ರ್ರನನ್ನು ಕರೆಸುವ ಮತ್ತು ತನ್ನ ನಿವೃತ್ತಿಗೆ ಕೆಲವೇ ದಿನಗಳ ಮುನ್ನ ಹೇಳಿಕೆ ನೀಡುವ ಅಗತ್ಯವೇನಿತ್ತು? ಅವರು ಯಾರನ್ನು ತೃಪ್ತಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದವೆ ಪ್ರಶ್ನಿಸಿದ್ದರು. ಚೆಲ್ಲೂರ್‌ಗೆ ಸಂಬಂಧಿಸಿದಂತೆ ಇಂತಹ ಟೀಕೆಗಳು ಇದೇ ಮೊದಲಲ್ಲ,ಹಿಂದೆಯೂ ಅವರು ಹಲವಾರು ಬಾರಿ ಟೀಕೆಗಳಿಗೆ ಗುರಿಯಾಗಿದ್ದರು.

ಮೋದಕ್ ಸೇರಿದಂತೆ ಎಸ್‌ಐಡಿಗೆ ಹೇಳಿಕೆಗಳನ್ನು ಸಲ್ಲಿಸಿದ್ದ ನ್ಯಾಯಾಧೀಶರನ್ನು ಪಾಟಿಸವಾಲಿಗೆ ಒಳಪಡಿಸಲೂ ದವೆ ಆಗ್ರಹಿಸಿದ್ದರು ಮತ್ತು ಈ ಹೇಳಿಕೆಗಳನ್ನು ನ್ಯಾಯಾಲಯವು ನೆಚ್ಚಿಕೊಂಡಿರುವುದನ್ನೂ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News