2016ರಲ್ಲೇ 400ಕ್ಕೂ ಅಧಿಕ ಬಾಂಬ್ ದಾಳಿಗಳು ನಡೆದಿವೆ ಎನ್ನುತ್ತಿದೆ ಸರಕಾರದ ವರದಿ

Update: 2018-09-19 15:16 GMT

ಹೊಸದಿಲ್ಲಿ, ಸೆ.19: “ನಾವು ಒಂದು ವಿಷಯವನ್ನು ತಿಳಿದುಕೊಳ್ಳಬೇಕು, ಮೆಚ್ಚಬೇಕು ಹಾಗು ಖುಷಿಪಡಬೇಕು… ಕಳೆದ 4 ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಬಾಂಬ್ ಸ್ಫೋಟಗಳು ಸಂಭವಿಸಿಲ್ಲ..ನಡೆಯುತ್ತಿರುವುದು ಗಡಿಪ್ರದೇಶದಲ್ಲಿ. ದುರದೃಷ್ಟವಶಾತ್ ಕಾಶ್ಮೀರದಲ್ಲಿ” ಎಂದು ಇಶಾ ಫೌಂಡೇಶನ್ ನ ಸ್ಥಾಪಕ ಜಗ್ಗಿ ವಾಸುದೇವ್ ಸೆಪ್ಟಂಬರ್ 16ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.

ಆದರೆ ಕಳೆದ 4 ವರ್ಷಗಳಲ್ಲಿ ಬಾಂಬ್ ದಾಳಿಗಳು ದೇಶದೊಳಗೆ ನಡೆದೇ ಇಲ್ಲವೇ ಎಂದು ಪ್ರಶ್ನಿಸಿದರೆ ಸಿಗುವ ಉತ್ತರ ‘ನಡೆದಿದೆ’. 2018ರವರೆಗೆ 4 ವರ್ಷಗಳಲ್ಲಿ 2016ರಲ್ಲೇ 400 ಬಾಂಬ್ ದಾಳಿಗಳು ಸೇರಿ ನೂರಾರು ದಾಳಿಗಳು ನಡೆದಿವೆ ಎಂದು ಹೇಳುತ್ತದೆ ಸಂಸತ್ ಗೆ ಸರಕಾರ ಸಲ್ಲಿಸಿದ ವರದಿ. ಇದನ್ನು FactChecker ವರದಿ ಮಾಡಿದೆ.

2016ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 69 ಬಾಂಬ್ ದಾಳಿಗಳು ನಡೆದಿದ್ದರೆ, ಮಣಿಪುರದಲ್ಲಿ 64 ಬಾಂಬ್ ದಾಳಿಗಳು ನಡೆದಿವೆ. ನಾಲ್ಕು ವರ್ಷಗಳಿಂದ ಬಿಹಾರ, ಮಧ್ಯ ಪ್ರದೇಶ ಹಾಗು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕಡಿಮೆ ತೀವ್ರತೆಯ ಸೇರಿದಂತೆ ಹಲವು ಬಾಂಬ್ ದಾಳಿಗಳು ನಡೆದಿವೆ ಎಂದು ಅಧಿಕೃತ ಮತ್ತು ಮಾಧ್ಯಮ ವರದಿಗಳು ತಿಳಿಸುತ್ತವೆ.

2018ರ ಜನವರಿಯಲ್ಲಿ ಕಡಿಮೆ ತೀವ್ರತೆಯ ಐಇಡಿ ಬಾಂಬ್ ಒಂದು ಬಿಹಾರದ ಬೋಧ್ ಗಯಾದಲ್ಲಿ ಸ್ಫೋಟಗೊಂಡಿತ್ತು. ಈ ಬಗ್ಗೆ ಮಾರ್ಚ್ 21ರಂದು ಸರಕಾರವು ರಾಜ್ಯಸಭೆಗೆ ಮಾಹಿತಿ ನೀಡಿದೆ. ಇದೇ ಸ್ಥಳದಲ್ಲಿ ಪತ್ತೆಯಾಗಿದ್ದ ಎರಡು ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು.

2017ರ ಮಾರ್ಚ್ 7ರಂದು ಮಧ್ಯಪ್ರದೇಶದ ಜಾಬ್ಡಿ ಸ್ಟೇಷನ್ ನಲ್ಲಿ ಭೋಪಾಲ್-ಉಜ್ಜೈನ್ ಪ್ರಯಾಣಿಕ ರೈಲಿನ ಮೇಲೆ ಬಾಂಬ್ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದರು. ಇದು ಐಸಿಸ್ ನಿಂದ ನಡೆದ ಮೊದಲ ದಾಳಿ ಎಂದು ಸರಕಾರ 2017ರ ಮಾರ್ಚ್ 24ರಂದು ಘೋಷಿಸಿತ್ತು.

2015ರ ಜನವರಿ 23ರಂದು ಬಿಹಾರದ ಭೋಜ್ ಪುರ್ ನಗರದ ನ್ಯಾಯಾಲಯದ ಮೇಲೆ ಬಾಂಬ್ ದಾಳಿ ನಡೆದಿತ್ತು. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು. 18 ಮಂದಿ ಗಾಯಗೊಂಡಿದ್ದರು. 2014ರ ಡಿಸೆಂಬರ್ 28ರಂದು ಬೆಂಗಳೂರಿನ ಎಂಟರ್ ಟೈನ್ ಮೆಂಟ್ ಹಬ್ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಘಟನೆಯಲ್ಲಿ ಒಬ್ಬರು ಮೃತಪಟ್ಟು ಮೂವರು ಗಾಯಗೊಂಡಿದ್ದರು.

2016ರಲ್ಲಿ 118 ಸಾವು, 505 ಮಂದಿಗೆ ಗಾಯ

2016ರಲ್ಲಿ ಭಾರತದಲ್ಲಿ 337 ಐಇಡಿ ಮತ್ತು 69 ಇತರ ಸ್ಫೋಟಕಗಳ ದಾಳಿ ನಡೆದಿವೆ. ಇದು 2017ರ ಎಪ್ರಿಲ್ 11ರಂದು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ ರಾಷ್ಟ್ರೀಯ ಬಾಂಬ್ ಡಾಟಾ (ಎನ್ ಬಿಡಿಸಿ) ಕೇಂದ್ರ ನೀಡಿದ ಮಾಹಿತಿಯ ಆಧಾರದಲ್ಲಿ ಲೋಕಸಭೆಗೆ ಗೃಹ ಸಚಿವಾಲಯ ನೀಡಿದ ಮಾಹಿತಿ.

2016ರಲ್ಲಿ ನಡೆದ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ 118 ಮಂದಿ ಮೃತಪಟ್ಟು 505 ಮಂದಿ ಗಾಯಗೊಂಡಿದ್ದಾರೆ. “

“ಎನ್ ಬಿಡಿಸಿ ನೀಡಿದ ಮಾಹಿತಿಯು ದೇಶದಲ್ಲಿ ನಡೆದ ಎಲ್ಲಾ ಸಣ್ಣ ಮಟ್ಟದ ಮತ್ತು ದೊಡ್ಡ ಮಟ್ಟದ ಬಾಂಬ್ ಸ್ಫೋಟ ಪ್ರಕರಣಗಳನ್ನು ಒಳಗೊಂಡಿದೆ” ಎಂದು ಮಾಹಿತಿಯಲ್ಲಿ ತಿಳಿಸಲಾಗಿತ್ತು.

2015ರಲ್ಲಿ 268 ಐಇಡಿ ಸ್ಫೋಟಗಳು, 2014ರಲ್ಲಿ 190, 2013ರಲ್ಲಿ 283 ಮತ್ತು 2012ರಲ್ಲಿ 365 ಬಾಂಬ್ ಸ್ಫೋಟಗಳು ನಡೆದಿವೆ ಎಂದು ಎನ್ ಬಿಡಿಸಿ ಮಾಹಿತಿಯ ಆಧಾರದಲ್ಲಿ ಈ ಹಿಂದೆ ಇಕನಾಮಿಕ್ ಟೈಮ್ಸ್ ವರದಿ ಪ್ರಕಟಿಸಿತ್ತು.

2016ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅತೀ ಹೆಚ್ಚು (69) ಬಾಂಬ್ ಸ್ಫೋಟಗಳು ಸಂಭವಿಸಿವೆ. ಇದರಲ್ಲಿ 31 ಐಇಡಿ ಮತ್ತು 38 ಇತರ ಸ್ಫೋಟಕಗಳಿಂದ ನಡೆದ ಘಟನೆಗಳಾಗಿವೆ. 2016ರಲ್ಲಿ ಛತ್ತೀಸ್ ಗಢದಲ್ಲಿ ಅತೀ ಹೆಚ್ಚು (60) ಐಇಡಿ ಸ್ಫೋಟಗಳು, ಮಣಿಪುರದಲ್ಲಿ 40, ಕೇರಳದಲ್ಲಿ 33, ತಮಿಳುನಾಡಿನಲ್ಲಿ 32 ಮತ್ತು ಜಮ್ಮು – ಕಾಶ್ಮೀರದಲ್ಲಿ 31 ಘಟನೆಗಳು ವರದಿಯಾಗಿವೆ.

ಕೃಪೆ: www.thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News