"ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ರೂಪಿಸಿರುವ ಯೋಜನೆಗಳ ಅರಿವು ಮೂಡಿಸಿ"

Update: 2018-09-19 17:42 GMT

ಬೆಂಗಳೂರು, ಸೆ.19: ಕೇಂದ್ರ ಸರಕಾರ ಬುಡಕಟ್ಟು ಜನಾಂಗದವರ ಸರ್ವತೋಮುಖ ಅಭಿವೃದ್ಧಿಗಾಗಿ ರೂಪಿಸಿರುವ ಯೋಜನೆಗಳ ಕುರಿತು ಅಧಿಕಾರಿಗಳು ಆದಿವಾಸಿ ಜನರಲ್ಲಿ ಅರಿವು ಮೂಡಿಸಬೇಕೆಂದು ಕೇಂದ್ರದ ಆದಿವಾಸಿ ಬುಡಕಟ್ಟು ಸಚಿವಾಲಯದ ಕಾರ್ಯದರ್ಶಿ ದೀಪಕ್ ಖಂಡೇಕರ್ ಹೇಳಿದರು.

ಬುಧವಾರ ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಆದಿವಾಸಿ ಜನಾಂಗಗಳ ಕರಕುಶಲ ವಸ್ತುಗಳ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬುಡಕಟ್ಟು ಜನಾಂಗಗಳ ಗುಣಮಟ್ಟ ಜೀವನೋಪಾಯ ಸುಧಾರಣೆಗೊಳಿಸಲು ಗಂಭೀರವಾಗಿ ಪರಿಗಣಿಸಿದೆ. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಮಾಜಮುಖಿಗೆ ತರಬೇಕೆಂಬ ನಿಟ್ಟಿನಲ್ಲಿ ಶಾಶ್ವತ ಪರಿಹಾರಕ್ಕಾಗಿ ರೂಪಿಸಿರುವ ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕೆಂದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಯೋಜನೆಗಳನ್ನು ಸರಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮಗಳ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ. ಬುಡಕಟ್ಟು ಜನಾಂಗದವರು ಉತ್ಪಾದಿಸುವ ಕರಕುಶಲ ವಸ್ತುಗಳಿಗೆ ವ್ಯವಸ್ಥಿತ ಮಾರುಕಟ್ಟೆ ಒದಗಿಸಲು ದೇಶದ 18 ರಾಜ್ಯಗಳು ಒಪ್ಪಿಗೆ ಸೂಚಿಸಿವೆ. ಸರಕಾರಗಳು ಆದಿವಾಸಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ, ವಿಶೇಷ ವಿದ್ಯಾರ್ಥಿ ವೇತನವನ್ನು ನೀಡುತ್ತಿವೆ ಎಂದು ಹೇಳಿದರು.

ದಕ್ಷಿಣ ಭಾರತ ಡಿಐಸಿಸಿಐ ಅಧ್ಯಕ್ಷ ರಾಜ ನಾಯಕ್ ಮಾತನಾಡಿ, ರಾಜ್ಯದಲ್ಲಿ 8 ರೀತಿಯ ಬುಡಕಟ್ಟು ಜನಾಂಗದವರಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದಲ್ಲಿನ ಬುಡಕಟ್ಟು ಜನರನ್ನು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿಗೊಳಿಸಲು ರಾಜ್ಯ ಸರಕಾರ ಶ್ರಮಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಡಿಐಸಿಸಿಐ ಅಧ್ಯಕ್ಷ ಸುರೇಶ್ ನಾಯಕ್, ರಾಮನಾಥನ್, ಎಸಿಎಸ್ ಸಂಸ್ಥೆಯ ಮುಖ್ಯಸ್ಥ ಲಕ್ಷ್ಮೀನಾರಾಯಣ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News