ನಾವು ಖಂಡಿತವಾಗಿಯೂ ರಫೇಲ್ ವಿಮಾನಗಳನ್ನು ಉತ್ಪಾದಿಸುತ್ತಿದ್ದೆವು: ಎಚ್‍ಎಎಲ್ ಮಾಜಿ ಮುಖ್ಯಸ್ಥ

Update: 2018-09-20 07:45 GMT

ಹೊಸದಿಲ್ಲಿ, ಸೆ.20: ಫ್ರಾನ್ಸ್ ಮೂಲದ ಕಂಪನಿಯ ಜತೆಗೆ ಸರಕಾರವು ಕೆಲಸ ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದರೆ ಸರ್ಕಾರಿ ಸ್ವಾಮ್ಯದ ವಿಮಾನ ತಯಾರಿಕಾ ಕಂಪನಿಯಾದ ಹಿಂದೂಸ್ತಾನ್ ಏರೊನಾಟಿಕಲ್ಸ್ ಲಿಮಿಟೆಡ್ (ಎಚ್‍ಎಎಲ್)ನಲ್ಲೇ ಭಾರತದಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ಉತ್ಪಾದಿಸಬಹುದಿತ್ತು ಎಂದು ಮೂರು ವಾರಗಳ ಹಿಂದಿನವರೆಗೂ ಸಂಸ್ಥೆಯ ಮುಖ್ಯಸ್ಥರಾಗಿದ್ದ ಟಿ.ಸುವರ್ಣ ರಾಜು ಹೇಳಿದ್ದಾರೆ.

ಆದರೆ ಎಚ್‍ಎಎಲ್ ಪ್ರತಿ ವಿಮಾನದ ಅಪೇಕ್ಷಿತ ದರದಲ್ಲಿ ವಿಮಾನವನ್ನು ನಿರ್ಮಿಸುವುದು ಸಾಧ್ಯವಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅತ್ಯಾಧುನಿಕ ಯುದ್ಧವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಕಂಪನಿಗೆ ಇದೆ ಎಂದವರು ಪ್ರತಿಪಾದಿಸಿದ್ದಾರೆ.

ರಫೇಲ್ ಯುದ್ಧವಿಮಾನ ಈ ಸರ್ಕಾರಿ ಸ್ವಾಮ್ಯದ ಕಂಪನಿಗೆ ಸವಾಲಿನ ಕೆಲಸವಾಗುತ್ತಿತ್ತು ಎಂದು ವಾಯುಪಡೆಯ ಮಾಜಿ ಮುಖ್ಯಸ್ಥರೂ ಆಗಿರುವ ಅವರು ಅಭಿಪ್ರಾಯಪಟ್ಟಿದ್ದಾರೆ. “ಕಚ್ಚಾ ವಸ್ತುಗಳ ಹಂತದಿಂದ ಹಿಡಿದು, ಎಚ್‍ಎಎಲ್ 25 ಟನ್ ತೂಕದ, ನಾಲ್ಕನೇ ಪೀಳಿಗೆಯ ಯುದ್ಧವಿಮಾನ ಸುಕೋಯ್-30ನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮತ್ತೆ ಈ ಬಗ್ಗೆ ಚರ್ಚೆ ಏಕೆ? ನಾವು ಖಂಡಿತವಾಗಿಯೂ ರಫೇಲ್ ವಿಮಾನಗಳನ್ನು ಉತ್ಪಾದಿಸಬಹುದಿತ್ತು” ಎಂದು ಸೆಪ್ಟೆಂಬರ್ 1ರಂದು ನಿವೃತ್ತರಾದ ಅವರು ಹೇಳಿದರು.

ರಫೇಲ್ ಒಪ್ಪಂದದ ಬಗ್ಗೆ ಸರ್ಕಾರಿ ಸ್ವಾಮ್ಯದ ವಿಮಾನಯಾನ ತಯಾರಿಕಾ ಕಂಪನಿಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಇದೇ ಮೊದಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News