‘ಸ್ಮಶಾನ-ಖಬರಸ್ತಾನ ರಾಜಕೀಯ’ ಅಧಿಕಾರಕ್ಕಾಗಿ ವಿನಃ ಜನಕಲ್ಯಾಣಕ್ಕಾಗಿ ಅಲ್ಲ: ಮೋಹನ್ ಭಾಗವತ್

Update: 2018-09-20 08:06 GMT

ಹೊಸದಿಲ್ಲಿ, ಸೆ.20: ಸ್ಮಶಾನ-ಖಬರಸ್ತಾನ ರಾಜಕೀಯ ಅಧಿಕಾರಕ್ಕಾಗಿಯೇ ವಿನಃ ಜನಕಲ್ಯಾಣಕ್ಕಾಗಿ ಅಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ನೀಡಿರುವ ಹೇಳಿಕೆ ಪ್ರಧಾನಿ ಮೋದಿಯವರಿಗೆ ಪರೋಕ್ಷ ಸಂದೇಶ ಎಂದು ವಿಶ್ಲೇಷಿಸಲಾಗುತ್ತಿದೆ.

ನರೇಂದ್ರ ಮೋದಿಯವರು ಕಳೆದ ವರ್ಷ ಉತ್ತರ ಪ್ರದೇಶ ಚುನಾವಣೆಯಲ್ಲಿ ಇದನ್ನು ಬಳಸಿಕೊಂಡಿದ್ದ ಹಿನ್ನೆಲೆಯಲ್ಲಿ ಭಾಗವತ್ ಹೇಳಿಕೆ ವಿಶೇಷ ಮಹತ್ವ ಪಡೆದಿದೆ. ಭವಿಷ್ಯದ ಭಾರತ- ಆರೆಸ್ಸೆಸ್ ಚಿಂತನೆ ವಿಚಾರ ಸಂಕಿರಣದ ಸಮಾರೋಪದ ದಿನವಾದ ಬುಧವಾರ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜಕೀಯ ಎನ್ನುವುದು ಜನಕಲ್ಯಾಣಕ್ಕೆ ಇರಬೇಕು. ಅಧಿಕಾರ ಅದಕ್ಕೆ ಸಾಧನವಾಗಬೇಕು ಎಂದು ಭಾಗವತ್ ಸೂಚ್ಯವಾಗಿ ಹೇಳಿದರು.

“ಇದು ಆದಲ್ಲಿ ಜೆಪಿ (ಜಯಪ್ರಕಾಶ್ ನಾರಾಯಣ್) ಹಾಗೂ ಗಾಂಧೀಜಿ ಏನು ನಿರೀಕ್ಷಿಸಿದ್ದರೋ ಅದು... ಆಗ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸ್ಮಶಾನ-ಖಬರಸ್ತಾನ, ಕೇಸರಿ ಉಗ್ರ ಮುಂತಾದ ಸಮಸ್ಯೆಯೇ ಬರುತ್ತಿರಲಿಲ್ಲ. ಅಧಿಕಾರಕ್ಕಾಗಿ ರಾಜಕೀಯವನ್ನು ಬಳಸಿಕೊಂಡಾಗ ಇದೆಲ್ಲ ಬರುತ್ತದೆ. ಜನಕಲ್ಯಾಣಕ್ಕೆ ಅಧಿಕಾರವನ್ನು ಬಳಸಿಕೊಂಡಾಗ ಇಂತಹ ಸಮಸ್ಯೆ ಉದ್ಭವಿಸುವುದಿಲ್ಲ” ಎಂದವರು ಹೇಳಿದರು.

ಉತ್ತರ ಪ್ರದೇಶದಲ್ಲಿ ಹಿಂದಿನ ಅಖಿಲೇಶ್ ಯಾದವ್ ಸರ್ಕಾರ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆಪಾದಿಸುವ ವೇಳೆ ಮೋದಿ ಈ ಉಲ್ಲೇಖ ಮಾಡಿದ್ದರು. "ನೀವು ಒಂದು ಗ್ರಾಮದಲ್ಲಿ ಖಬರಸ್ತಾನ ನಿರ್ಮಿಸಿದರೆ, ಸ್ಮಶಾನವನ್ನೂ ನಿರ್ಮಿಸಬೇಕು. ರಮಝಾನ್ ದಿನ ಯಾವುದೇ ತಡೆಯಿಲ್ಲದೇ ವಿದ್ಯುತ್ ನೀಡಿದರೆ, ದೀಪಾವಳಿ ದಿನವೂ ಅದನ್ನು ನೀಡಬೇಕು. ಯಾವುದೇ ತಾರತಮ್ಯ ಇರಬಾರದು" ಎಂದು ಮೋದಿ ರ್ಯಾಲಿಯೊಂದರಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News