ಜಾರ್ಖಂಡ್‌ನ ನದೀಮ್ ವಿಶ್ವ ದಾಖಲೆ

Update: 2018-09-20 12:23 GMT

ಚೆನ್ನೈ, ಸೆ.20: ಜಾರ್ಖಂಡ್‌ನ ಸ್ಪಿನ್ನರ್ ಶಾಬಾಝ್ ನದೀಮ್  ಅವರು     ವಿಜಯ್ ಹಝಾರೆ ಟ್ರೋಫಿ ಟೂರ್ನಮೆಂಟ್‌ನಲ್ಲಿ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 10ರನ್‌ಗೆ 8 ವಿಕೆಟ್ ಉಡಾಯಿಸುವ ಮೂಲಕ ಎ’ ಲೀಸ್ಟ್‌ನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

  ಎಡಗೈ ಸ್ಪಿನ್ನರ್ ನದೀಮ್ ದಾಳಿಗೆ ತತ್ತರಿಸಿದ ರಾಜಸ್ಥಾನ ತಂಡ ಗುರುವಾರ ನಡೆದ ಪಂದ್ಯದಲ್ಲಿ 28.3 ಓವರ್‌ಗಳಲ್ಲಿ 73 ರನ್‌ಗಳಿಗೆ ಆಲೌಟಾಗಿದೆ. ಜಾರ್ಖಂಡ್ ತಂಡ 7 ವಿಕೆಟ್‌ಗಳ ಜಯ ಗಳಿಸಿದೆ.

  ಟಾಸ್ ಜಯಿಸಿ ರಾಜಸ್ಥಾನ ಬ್ಯಾಟಿಂಗ್ ಆಯ್ದುಕೊಂಡಿತ್ತು. ತಂಡದ ಆರಂಭಿಕ ದಾಂಡಿಗ ಅಮಿತ್ ಕುಮಾರ್(17) ಅವರನ್ನು 10ನೇ ಓವರ್‌ನ ಕೊನೆಯ ಎಸೆತದಲ್ಲಿ ನದೀಮ್ ಪೆವಿಲಿಯನ್‌ಗೆ ಅಟ್ಟಿದರು. ಅಂಕಿತ್ ಲಾಂಬಾ(20) , ನಾಯಕ ಅಶೋಕ್ ಮೆನಾರಿಯಾ(4), ಮಹಿಪಾಲ್ ಲೊಮ್ರಿರ್(6), ವಿಕೆಟ್ ಕೀಪರ್ ಚೇತನ್ ಬಿಸ್ತ್(0), ತಾಜಿಂದರ್ ಸಿಂಗ್(1), ಅಭಿಮನ್ಯು ಲಾಂಬಾ(0), ರಾಬಿನ್ ಬಿಸ್ತ್(15) ವಿಕೆಟ್ ಉಡಾಯಿಸುವ ಮೂಲಕ ನದೀಮ್ ವಿಶ್ವ ದಾಖಲೆ ನಿರ್ಮಿಸಿದರು.

    ಮಹಿಪಾಲ್, ಚೇತನ್ ಬಿಸ್ತ್ ಅವರನ್ನು 20ನೇ ಓವರ್‌ನಲ್ಲಿ ಮತ್ತು 22ನೇ ಓವರ್‌ನ ಮೊದಲ ಎಸೆತದಲ್ಲಿ ತಾಜಿಂದರ್ ಸಿಂಗ್ ವಿಕೆಟ್ ಉರುಳಿಸುವ ಮೂಲಕ ನದೀಮ್ ಈ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು. ನದೀಮ್ ದಾಳಿಗೆ ಸಿಲುಕಿ 24 ಓವರ್‌ಗಳಲ್ಲಿ ರಾಜಸ್ಥಾನ 66 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯ ಎರಡು ವಿಕೆಟ್‌ಗಳನ್ನು ಅಂಕುಲ್ ರಾಯ್ ಕಿತ್ತರು. ನದೀಮ್ ಸಾಧನೆ 10-4-10-8. ಇದರೊಂದಿಗೆ ನದೀಮ್ ಅವರು ದಿಲ್ಲಿಯ ರಾಹುಲ್ ಸಾಂಘ್ವಿ ಸಾಧನೆಯನ್ನು ಹಿಂದಿಕ್ಕಿದರು. 1997-98ರಲ್ಲಿ ಹಿಮಾಚಲ ಪ್ರದೇಶ ವಿರುರ್ಧದ ಪಂದ್ಯದಲ್ಲಿ ಸಾಂಘ್ವಿ 15ಕ್ಕೆ 8 ವಿಕೆಟ್ ಪಡೆದಿದ್ದರು. ಸಾಂಘ್ವಿ ಈ ಸಾಧನೆಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ವಿರುದ್ಧ 2001ರಲ್ಲಿ 1 ಪಂದ್ಯದಲ್ಲಿ ಆಡಿದ್ದರು.

ನದೀಮ್ ಇದೀಗ ನೀಡಿರುವ ಪ್ರದರ್ಶನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡ ಸೇರ್ಪಡೆಯ ಹಾದಿಯಲ್ಲಿದ್ದಾರೆ.

29ರ ಹರೆಯದ ನದೀಮ್ 99 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 375 ವಿಕೆಟ್‌ಗಳನ್ನು ಗಳಿಸಿದ್ದಾರೆ. 87 ಲೀಸ್ಟ್ ‘ಎ’ ಪಂದ್ಯಗಳಲ್ಲಿ 124 ವಿಕೆಟ್ ಮತ್ತು 109 ಟಿ20 ಪಂದ್ಯಗಳಲ್ಲಿ 89 ವಿಕೆಟ್‌ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News