ಬೆಂಗಳೂರು: ರಸ್ತೆ ಅಪಘಾತಕ್ಕೆ ಯುವಕ ಬಲಿ

Update: 2018-09-20 13:57 GMT

ಬೆಂಗಳೂರು, ಸೆ.20: ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ಯುವಕನಿಗೆ ಅತಿ ವೇಗವಾಗಿ ಬಂದ ವಾಹನ ಢಿಕ್ಕಿ ಹೊಡೆದ ಪರಿಣಾಮ ಆತ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಅಂಜನಾಪುರದ ನಿವಾಸಿ ರಾಘವೇಂದ್ರ ಕೆ. (26) ಮೃತಪಟ್ಟ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಸರುಘಟ್ಟದ ಟಿವಿಎಸ್ ಮಳಿಗೆ ನಡೆಸುತ್ತಿದ್ದ ರಾಘವೇಂದ್ರ, ಎಂದಿನಂತೆ ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ರಾತ್ರಿ 9:45ರ ಸುಮಾರಿಗೆ ನೈಸ್‌ರಸ್ತೆಯ ಬೈರೋಹಳ್ಳಿ ಬಳಿ ಹೋಗುತ್ತಿದ್ದಾಗ ಅತಿ ವೇಗವಾಗಿ ಮುನ್ನುಗ್ಗಿದ ವಾಹನ ಇವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಢಿಕ್ಕಿ ರಭಸಕ್ಕೆ ರಾಘವೇಂದ್ರ ಅವರು ಬೈಕ್‌ನಿಂದ ಕೆಳಗೆ ಬಿದ್ದ ಪರಿಣಾಮ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ರಾಜರಾಜೇಶ್ವರಿನಗರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News