ಆರ್ಥಿಕ ನೆರವು ಕೋರಿ ಬರುವವರಿಗೆ ಸಹಕರಿಸಿ: ಕೇಂದ್ರ ಸಚಿವ ಸದಾನಂದಗೌಡ

Update: 2018-09-20 14:13 GMT

ಬೆಂಗಳೂರು, ಸೆ. 20: ಜನರ ಕಲ್ಯಾಣ ಕಾರ್ಯಗಳಿಗಿರುವ ಯೋಜನೆಗಳನ್ನು ಶೀಘ್ರವಾಗಿ ಜನರಿಗೆ ತಲುಪಿಸಿ, ಅವುಗಳನ್ನು ಫಲಪ್ರದ ಮಾಡುವುದು ಅಧಿಕಾರಿಗಳ ಕೈಯಲ್ಲಿದೆ. ಆರ್ಥಿಕ ನೆರವು ಕೋರಿ ಬರುವ ಅರ್ಜಿಗಳಿಗೆ ಬ್ಯಾಂಕ್ ಅಧಿಕಾರಿಗಳು ತುರ್ತಾಗಿ ಸ್ಪಂದಿಸಿ ಒಂದು ವಾರದೊಳಗೆ ಇತ್ಯರ್ಥಪಡಿಸಬೇಕು ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದುರ್ಬಲರು, ಆರ್ಥಿಕವಾಗಿ ಹಿಂದುಳಿದವರು ವಿವಿಧ ಯೋಜನೆಗಳಡಿಯಲ್ಲಿ ನೆರವು ಕೋರಿ ಬ್ಯಾಂಕುಗಳಿಗೆ ಅರ್ಜಿ ಸಲ್ಲಿಸಿದಾಗ ಆ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಿ ಫಲಾನುಭವಿಗಳಿಗೆ ಅಗತ್ಯ ನೆರವು ನೀಡುವುದು ಬ್ಯಾಂಕ್‌ಗಳ ಕರ್ತವ್ಯ. ಒಂದು ವೇಳೆ ಅರ್ಜಿದಾರರು ಆ ಯೋಜನೆಗೆ ಅನರ್ಹರಾಗಿದ್ದ ಸಂದರ್ಭದಲ್ಲಿ ಆಯ್ಕೆ ಪಟ್ಟಿಯಿಂದ ಅವರ ಹೆಸರು ತೆಗೆದು ಅರ್ಹರಿಗೆ ಅಗತ್ಯ ನೆರವು ನೀಡಲು ಶೀಘ್ರ ಕ್ರಮ ತೆಗೆದುಕೊಳ್ಳಬೇಕು. ಲೀಡ್‌ಬ್ಯಾಂಕ್ ಅಧಿಕಾರಿಗಳ ನೆರವಿನೊಂದಿಗೆ ಇತರ ಬ್ಯಾಂಕ್ ಮ್ಯಾನೇಜರ್‌ಗಳು ನಿಯಮಿತವಾಗಿ ಸಭೆಗಳನ್ನು ನಡೆಸಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದರು.

2020-22ರ ಹೊತ್ತಿಗೆ ದೇಶದ ಪ್ರತಿಯೊಬ್ಬ ಪ್ರಜೆಯು ತನ್ನದೆ ಆದ ಸೂರು ಹೊಂದಿರಬೇಕೆನ್ನುವುದು ನಮ್ಮ ಆಶಯ. ಇದಕ್ಕೆ ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಸಂಸ್ಥೆಗಳು ಒಟ್ಟುಗೂಡಿ ಕೆಲಸ ಮಾಡಿ ಈ ಕಾರ್ಯವನ್ನು ಯಶಸ್ವಿಗೊಳಿಸಲು ಶ್ರಮಿಸಬೇಕು ಎಂದರು.

ಬೆಂಗಳೂರು ನಗರ ಜಿಲ್ಲೆಯಲ್ಲಿಯೇ 2200 ವಿವಿಧ ಬ್ಯಾಂಕ್‌ಗಳ ಶಾಖೆಗಳಿದ್ದು, ಒಂದೊಂದು ಬ್ಯಾಂಕ್ ಶಾಖೆಯು ಕನಿಷ್ಠ ಇಬ್ಬರಿಗೆ ಸಾಲ ನೀಡಿದ್ದಲ್ಲಿ ಸ್ಟಾರ್ಟ್‌ಅಪ್ ಯೋಜನೆಗಳು/ಸ್ಯಾಂಡಪ್ ಇಂಡಿಯಾದಂತಹ ಯೋಜನೆಗಳು ಫಲಪ್ರದ ಆಗುತ್ತವೆ. ಇದರಿಂದ 4500ರಿಂದ 5 ಸಾವಿರ ದಷ್ಟು ಜನ ಸ್ವಾವಲಂಬಿಗಳಾಗುತ್ತಾರೆ ಎಂದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಕೆ.ಎನ್.ಮಂಜುನಾಥ್ ಮಾತನಾಡಿ, ವಸತಿ ಹೀನರಿಗೆ ವಸತಿ ಸೌಕರ್ಯ ಕಲ್ಪಿಸುವ ಪ್ರಧಾನಮಂತ್ರಿ ಆವಾಸ್ ಯೋಜನೆ ಬಹಳಷ್ಟು ಉಪಯುಕ್ತ ಯೋಜನೆ. ಸರಿಯಾದ ಫಲಾನುಭಗಳನ್ನು ಗುರುತಿಸಿ ಅವರಿಗೆ ನೆರವು ನೀಡಲು ಇಂತಿಷ್ಟು ಎಂದು ಗುರಿಯನ್ನು ನಿಗದಿಪಡಿಸಿ ಗುರಿಮುಟ್ಟಲು ಬ್ಯಾಂಕ್‌ಗಳು ಸಹಕರಿಸಬೇಕು ಎಂದರು.

ಮಾರ್ಚ್ ತಿಂಗಳಲ್ಲಿ ಜಾರಿಯಾದ ಗ್ರಾಮ್ ಸ್ವರಾಜ್ ಅಭಿಯಾನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿರುವುದಾಗಿ ತಿಳಿಸಿದ ಅವರು, ಕಾರ್ಯಕ್ರಮದಡಿಯಲ್ಲಿ ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಶೇ.100ರಷ್ಟು ಸಾಧನೆಯಾಗಿರುವುದು ತೃಪ್ತಿ ತಂದಿದೆ ಎಂದರು.

ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್.ಅರ್ಚನಾ ಮಾತನಾಡಿ, ಆರೋಗ್ಯ ಯೋಜನೆಗಳಿಗೆ ಸಂಬಂಧಿಸಿದಂತೆ ಹಾಗೂ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಖಾತೆ ತೆರೆಯಲು ಫಲಾನುಭವಿಗಳು ಬ್ಯಾಂಕ್‌ಗಳಿಗೆ ಬಂದಾಗ ಅಧಿಕಾರಿಗಳು ಸಹಕರಿಸಬೇಕೆಂದು ತಿಳಿಸಿದರು. ಅಧ್ಯಕ್ಷ ಮುನಿರಾಜು, ಆರ್‌ಬಿಐ ಅಧಿಕಾರಿ ಸರೋಜಬಾಟಿಯಾ, ಬ್ಯಾಂಕ್ ಅಧಿಕಾರಿ ವಿಜಯಲಕ್ಷ್ಮಿ, ನಬಾರ್ಡ್ ಅಧಿಕಾರಿ ಗುಡಿಹಳ್ಳಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News