ಕಾರ್ಮಿಕ ಕ್ಷೇತ್ರದ ಲಿಂಗ ಅಸಮಾನತೆಯ ಅತ್ಯಂತ ಕೆಟ್ಟ ದೇಶಗಳ ಪಟ್ಟಿ: 12ನೆ ಸ್ಥಾನದಲ್ಲಿ ಭಾರತ

Update: 2018-09-20 14:18 GMT

ಹೊಸದಿಲ್ಲಿ, ಸೆ.20: ಕಾರ್ಮಿಕ ಕ್ಷೇತ್ರದಲ್ಲಿ ಭಾಗಿದಾರಿಕೆಯಲ್ಲಿ ಲಿಂಗ ಅಸಮಾನತೆ ಬಗ್ಗೆ ವಿಶ್ವಸಂಸ್ಥೆಯ ಮಾನವಾಭಿವೃದ್ಧಿ ವರದಿಯಲ್ಲಿ ಭಾರತ ಅತ್ಯಂತ ಕೆಟ್ಟ ದೇಶಗಳ ಪೈಕಿ ಹನ್ನೆರಡನೇ ಸ್ಥಾನವನ್ನು ಪಡೆದಿದೆ.

ಕಾರ್ಮಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಪುರುಷ ಮತ್ತು ಮಹಿಳೆಯ ಸಂಖ್ಯೆಯ ಮಧ್ಯೆ ಇರುವ ಅತ್ಯಂತ ಹೆಚ್ಚಿನ ಅಂತರವಿರುವ ದೇಶಗಳ ಪೈಕಿ ಭಾರತ 12ನೇ ಸ್ಥಾನದಲ್ಲಿದ್ದು, ಈ ಪಟ್ಟಿಯಲ್ಲಿರುವ ಇಪ್ಪತ್ತು ದೇಶಗಳ ಪೈಕಿ ಏಕೈಕ ಮುಸ್ಲಿಮೇತರ ರಾಷ್ಟ್ರವಾಗಿದೆ. ಕಾರ್ಮಿಕ ಮಾರುಕಟ್ಟೆಯಲ್ಲಿ ದುಡಿಯುತ್ತಿರುವ ಅಥವಾ ಕೆಲಸದ ಹಡುಕಾಟದಲ್ಲಿರುವ ಹದಿನೈದು ಅದಕ್ಕಿಂತ ಹೆಚ್ಚಿನ ಹರೆಯದ ಜನಸಂಖ್ಯೆಯನ್ನು ವಿಶ್ವಸಂಸ್ಥೆಯು ಕಾರ್ಮಿಕ ಕ್ಷೇತ್ರದ ಭಾಗಿದಾರಿಕೆ ದರ ಎಂದು ವ್ಯಾಖ್ಯಾನಿಸಿದೆ. ಭಾರತದಲ್ಲಿ ಶೇ.78.8 ಪುರುಷರು ಕಾರ್ಮಿಕರಾಗಿದ್ದರೆ ಮಹಿಳೆಯರ ಪ್ರಮಾಣ ಕೇವಲ ಶೇ.27.2 ಆಗಿದೆ. ಅಂದರೆ ಇಬ್ಬರ ಮಧ್ಯೆಶೇ.51.6ರ ಅಂತರವಿದೆ.

ಭಾರತವು ಜಾಗತಿಕ ಮಹಿಳಾ ಭಾಗಿದಾರಿಕೆ ಸರಾಸರಿಯಾದ ಶೇ.48.7ಗಿಂತಲೂ ಕಡಿಮೆಯಿದೆ. ಈ ಪಟ್ಟಿಯಲ್ಲಿ, ಮಹಿಳಾ ಕಾರ್ಮಿಕ ಕ್ಷೇತ್ರ ಭಾಗಿದಾರಿಕೆಯಲ್ಲಿ ಅತ್ಯಂತ ಕೆಟ್ಟ ದೇಶಗಳ ಪೈಕಿ ಅಗ್ರಸ್ಥಾನ ಪಡೆದ ದೇಶ ಅಫ್ಘಾನಿಸ್ತಾನ. ಇಲ್ಲಿ ಎರಡು ಲಿಂಗಗಳ ಮಧ್ಯೆ ಶೇ.67.2 ಅಂತರವಿದೆ. ನಂತರದ ಸ್ಥಾನದಲ್ಲಿ ಯೆಮನ್ ಮತ್ತು ಸಿರಿಯ ಅರಬ್ ಗಣರಾಜ್ಯವಿದೆ. ಭಾರತದ ನೆರೆಹೊರೆಯ ದೇಶಗಳ ಪೈಕಿ ಪಾಕಿಸ್ತಾನವನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳು ಉತ್ತಮ ನಿರ್ವಹಣೆ ತೋರಿವೆ. ಶೇ.57.8 ಲಿಂಗ ತಾರತಮ್ಯದೊಂದಿಗೆ ಪಾಕಿಸ್ತಾನ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ (ಶೇ.46.8) 18ನೇ ಸ್ಥಾನ, ಶ್ರೀಲಂಕಾ ಶೇ.39) 25ನೇ ಸ್ಥಾನದಲ್ಲಿದೆ. ಇನ್ನು ನೇಪಾಳ ದಕ್ಷಿಣ ಏಶ್ಯಾ ರಾಷ್ಟ್ರಗಳಲ್ಲೇ ಅತ್ಯುತ್ತಮ ಲಿಂಗ ಸಮಾನತೆ ಹೊಂದಿರುವ ದೇಶವಾಗಿದ್ದು ಶೇ.3.2 ಅಂತರದೊಂದಿಗೆ 169ನೇ ಸ್ಥಾನದಲ್ಲಿದೆ.

ಆರ್ಥಿಕವಾಗಿ ಬಲಾಢ್ಯ ದೇಶಗಳಾದ ಚೀನಾ ಶೇ.14.6ರೊಂದಿಗೆ 104ನೇ ಸ್ಥಾನಲ್ಲಿದ್ದು ಅಮೆರಿಕ ಶೇ.12.6 ಅಂತರ ದರದೊಂದಿಗೆ 114ನೇ ಸ್ಥಾನದಲ್ಲಿದೆ. ಕಾರ್ಮಿಕ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ತೊಡಗಿಕೊಂಡಿರುವ ಕೇವಲ ಎರಡು ರಾಷ್ಟ್ರಗಳು ಜಗತ್ತಿನಲ್ಲಿವೆ. ಅವುಗಳೆರಡೂ ಆಫ್ರಿಕನ್ ದೇಶಗಳಾದ ಬುರುಂಡಿ (ಶೇ.-2.7) ಮತ್ತು ಮೊಝಂಬಿಕ್ (ಶೇ.-7.9).

ಮೊಝಂಬಿಕ್‌ನಲ್ಲಿ ಶೇ.74.6 ಪುರುಷರು ಕಾರ್ಮಿಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರೆ ಮಹಿಳೆಯರ ಪ್ರಮಾಣ ಶೇ.82.5 ಆಗಿದೆ. ಬುರುಂಡಿಯಲ್ಲಿ ಶೇ.80.2 ಮಹಿಳೆಯರು ಕಾರ್ಮಿಕ ಕ್ಷೇತ್ರದಲ್ಲಿ ಭಾಗಿದಾರರಾಗಿದ್ದು ಪುರುಷರ ಪ್ರಮಾಣ ಶೇ.77.5 ಆಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News