ಗೌರಿ ಲಂಕೇಶ್ ಹತ್ಯೆ ಪ್ರಕರಣ: ಗನ್ ಸೂತ್ರದಾರ ‘ಕಲಾಸ್ಕರ್’ ಬಂಧನ

Update: 2018-09-20 15:21 GMT

ಬೆಂಗಳೂರು, ಸೆ.20: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲಿನ ಸೂತ್ರದಾರ ಶರದ್ ಕಲಾಸ್ಕರ್ ಎಂಬಾತನನ್ನು ಸಿಟ್ (ಎಸ್‌ಐಟಿ) ಬಂಧಿಸಿದೆ.

ಗುರುವಾರ ಮಹಾರಾಷ್ಟ್ರದಲ್ಲಿ ಶರದ್ ಕಲಾಸ್ಕರ್‌ನನ್ನು ಸಿಟ್ ತನಿಖಾಧಿಕಾರಿಗಳು ಬಂಧಿಸಿದ್ದು, ಈತ ಗೌರಿ ಲಂಕೇಶ್ ಹತ್ಯೆ ಪ್ರಕರಣದ 16ನೆ ಆರೋಪಿಯಾಗಿದ್ದಾನೆ.

ಗನ್ ಸೂತ್ರಧಾರ?: ವಿಚಾರವಾದಿ ಗೋವಿಂದ ಪನ್ಸಾರೆ ಅವರ ಹತ್ಯೆ ಪ್ರಕರಣ ಸಂಬಂಧ ಮಹಾರಾಷ್ಟ್ರದ ಎಟಿಎಸ್ ತನಿಖಾಧಿಕಾರಿಗಳು ಸುಧನ್ವಾ ಗೊಂಧಲೇಕರ್, ವೈಭವ್ ರಾವತ್ ಹಾಗೂ ಶರದ್ ಕಲಾಸ್ಕರ್‌ನನ್ನು ಬಂಧಿಸಿ ಪಿಸ್ತೂಲುಗಳನ್ನು ವಶಕ್ಕೆ ಪಡೆದಿದ್ದರು. ಗೌರಿ ಲಂಕೇಶ್ ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲು ಯಾವುದು ಎನ್ನುವುದು ಶರದ್‌ಗೆ ಗೊತ್ತಿರಬಹುದು ಎಂದು ದಟ್ಟ ಶಂಕೆ ವ್ಯಕ್ತವಾಗಿದೆ.

ಬಾಡಿ ವಾರೆಂಟ್: ಗೌರಿ ಹತ್ಯೆ ಪ್ರಕರಣದ ವಿಚಾರಣೆಗಾಗಿ ಎಸ್‌ಐಟಿ ತನಿಖಾಧಿಕಾರಿಗಳು, ಮಹಾರಾಷ್ಟ್ರ ನ್ಯಾಯಾಲಯದ ಅನುಮತಿ ಪಡೆದು ಬಾಡಿ ವಾರಂಟ್ ಮೂಲಕ ಶರದ್‌ನನ್ನು ವಶಕ್ಕೆ ಪಡೆದು, ಬಳಿಕ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಬಳಿಕ ನ್ಯಾಯಾಲಯ ಶರದ್‌ನನ್ನು 20 ದಿನಗಳವರೆಗೆ ಸಿಟ್ ಕಸ್ಟಡಿಗೆ ಒಪ್ಪಿಸಿತು.

‘ಮತ್ತೆ ಕಸ್ಟಡಿಗೆ ಸುಧನ್ವಾ’

ಸಿಟ್ ತನಿಖಾಧಿಕಾರಿಗಳ ವಶದಲ್ಲಿದ್ದ ಸುಧನ್ವಾ ಗೊಂಧಲೇಕರ್‌ನನ್ನು ಸಹ ವಿಶೇಷ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಲಾಯಿತು.

ಬಾಡಿ ವಾರಂಟ್ ಮೂಲಕ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯದ ಅನುಮತಿಯಂತೆ 15 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದೇವೆ. ಇನ್ನಷ್ಟು ಮಾಹಿತಿ ಆತನಿಂದ ಪಡೆಯಬೇಕಿದ್ದು, ಕಸ್ಟಡಿ ಅವಧಿ ವಿಸ್ತರಣೆ ಮಾಡಬೇಕು ಎಂದು ತನಿಖಾಧಿಕಾರಿಗಳು ಕೋರಿದರು. ಬಳಿಕ 10 ದಿನಗಳವರೆಗೆ ಸುಧನ್ವಾನನ್ನು ಸಿಟ್ ಕಸ್ಟಡಿಗೆ ನೀಡಿದೆ.

ಹತ್ತಾರು ಪಿಸ್ತೂಲು ಸಿಕ್ಕಿತ್ತು...?

ಎಟಿಎಸ್ ತನಿಖಾಧಿಕಾರಿಗಳು ಸುಧನ್ವಾ ಗೊಂಧಲೇಕರ್, ವೈಭವ್ ರಾವತ್ ಹಾಗೂ ಶರದ್ ಕಲಾಸ್ಕರ್‌ನನ್ನು ಮುಂಬೈನಲ್ಲಿ ಬಂಧಿಸಿದ್ದರು. ಆಗ, 16 ಪಿಸ್ತೂಲ್ ಜಪ್ತಿಯಾಗಿತ್ತು. ಪತ್ತೆಯಾಗಿದ್ದ 16 ಪಿಸ್ತೂಲ್ ಪೈಕಿ 15 ಹೊಸದಾಗಿ ಖರೀದಿ ಮಾಡಿರುವ ಅಂಶ ತನಿಖೆಯಲ್ಲಿ ತಿಳಿದುಬಂದಿತ್ತು. 16 ಪಿಸ್ತೂಲ್ ಪೈಕಿ 15 ಹೊಸದಾಗಿದ್ದರೆ 1 ಪಿಸ್ತೂಲ್ ಮೂರು ವಿಚಾರವಾದಿಗಳ ಹತ್ಯೆಗೆ ಬಳಸಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News