ಹೆಸರುಕಾಳು ಖರೀದಿ ಕೇಂದ್ರಗಳನ್ನು ಹೆಚ್ಚಿಸಲು ಈಶ್ವರ್ ಖಂಡ್ರೆ ಒತ್ತಾಯ

Update: 2018-09-20 15:29 GMT

ಬೆಂಗಳೂರು, ಸೆ.20: ಕೇಂದ್ರ ಸರಕಾರ ಕೇವಲ ನಾಮಕಾವಸ್ಥೆಗೆ ಹೆಸರುಕಾಳು ಖರೀದಿ ಕೇಂದ್ರಗಳನ್ನು ಸ್ಥಾಪಿಸುವ ಬದಲು ಅಗತ್ಯವಿರುವ ಎಲ್ಲ ಕಡೆಗೂ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ ಒತ್ತಾಯಿಸಿದರು.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವರ್ಷ ರಾಜ್ಯದಲ್ಲಿ ಸುಮಾರು 3.87ಲಕ್ಷ ಹೆಕ್ಟೇರ್‌ನಲ್ಲಿ ಪ್ರದೇಶದಲ್ಲಿ ಸುಮಾರು 1.24 ಲಕ್ಷ ಟನ್ ಹೆಸರುಕಾಳು ಬೆಳೆಯಲಾಗಿದೆ. ಆದರೆ, ಕೇಂದ್ರ ಸರಕಾರ ಕೇವಲ 23,750ಮೆಟ್ರಿಕ್ ಟನ್ ಖರೀದಿಗೆ ಮಾತ್ರ ಅನುಮತಿ ಕೊಟ್ಟಿದೆ. ಇದು ರೈತರ ತುಟಿಗೆ ತುಪ್ಪ ಬಳಿಯುವ ಪ್ರಯತ್ನವಷ್ಟೆ ಎಂದು ತಿಳಿಸಿದರು.

ಇವತ್ತು ಮಾರುಕಟ್ಟೆಯಲ್ಲಿ ಹೆಸರುಕಾಳಿಗೆ 4,700ರೂ.ನಿಂದ 5 ಸಾವಿರ ಬೆಲೆ ಇದೆ. ಇದು ಕನಿಷ್ಠ ಬೆಂಬಲ ಬೆಲೆಗಿಂತ 3ಸಾವಿರ ರೂ.ಕಡಿಮೆಯಿದೆ. ಹೀಗಾಗಿ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಿ ಪ್ರತಿ ಕ್ವಿಂಟಲ್‌ಗೆ 6,975ರೂ.ಗೆ ಖರೀದಿಸಿ, ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕೆಂದು ಅವರು ಹೇಳಿದರು.

ಬೀದರ್, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ 9 ಜಿಲ್ಲೆಗಳಲ್ಲಿ ಹೆಸರುಕಾಳು ಪ್ರಮುಖ ಬೆಳೆಯಾಗಿದೆ. ಈ ಬೆಳೆಯಿಂದ ನಷ್ಟವಾದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ಕೇಂದ್ರ ಸರಕಾರ ಈ ಬಾರಿ ಉತ್ಪಾದನೆಯಾಗಿರುವ ಹೆಸರುಕಾಳನ್ನು ಸಂಪೂರ್ಣವಾಗಿ ಖರೀದಿಸುವ ನಿಟ್ಟಿನಲ್ಲಿ ಚಿಂತಿಸಬೇಕು. ಆಗ ಮಾತ್ರ ರೈತ ಸಮುದಾಯಕ್ಕೆ ಸಹಾಯವಾಗಲಿದೆ ಎಂದು ಅವರು ಹೇಳಿದರು.

ಬೀದರ್ ಒಂದೇ ಜಿಲ್ಲೆಯಲ್ಲಿ 1ಲಕ್ಷ 30 ಸಾವಿರ ಕ್ವಿಂಟಲ್ ಹೆಸರುಕಾಳು ಬೆಳೆಯಲಾಗಿದೆ. ಆದರೆ, ಕೇಂದ್ರ ಸರಕಾರ ಕೇವಲ 20ಸಾವಿರ ಕ್ವಿಂಟಲ್ ಖರೀದಿಸುವುದಕ್ಕೆ ಮಾತ್ರ ಒಪ್ಪಿಗೆ ಸೂಚಿಸಿದೆ. ಇದರಿಂದ ರೈತರಿಗೆ ಯಾವುದೆ ಉಪಯೋಗವಾಗುವುದಿಲ್ಲ. ರೈತರು ಬೆಳೆದಿರುವ ಹೆಸರುಕಾಳನ್ನು ಸಂಪೂರ್ಣವಾಗಿ ಖರೀದಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News