ರಾಜ್ಯ ಸರಕಾರದ ಪ್ರಸ್ತಾವನೆಗಳ ತ್ವರಿತ ಕ್ರಮ ನನ್ನ ಆದ್ಯತೆ: ಸೈಯ್ಯದ್ ಮೋಹಿದ್ ಅಲ್ತಾಫ್

Update: 2018-09-20 15:32 GMT

ಬೆಂಗಳೂರು, ಸೆ.20: ಕೇಂದ್ರ ಸರಕಾರದ ಎದುರು ಬಾಕಿ ಇರುವ ರಾಜ್ಯ ಸರಕಾರದ ಪ್ರಸ್ತಾವನೆಗಳ ತ್ವರಿತ ಅಗತ್ಯ ಕ್ರಮ ಕೈಗೊಳ್ಳುವುದು ತನ್ನ ಆದ್ಯತೆಯಾಗಿದೆ ಎಂದು ರಾಜ್ಯ ಸರಕಾರದ ಹೊಸದಿಲ್ಲಿಯ ವಿಶೇಷ ಪ್ರತಿನಿಧಿ ಸೈಯ್ಯದ್ ಮೋಹಿದ್ ಅಲ್ತಾಫ್ ತಿಳಿಸಿದರು.

ಗುರುವಾರ ವಿಕಾಸಸೌಧದಲ್ಲಿ ತಮಗೆ ರಾಜ್ಯ ಸರಕಾರ ನಿಗದಿಪಡಿಸಿರುವ ಕಚೇರಿ ಪ್ರವೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಕೇಂದ್ರಕ್ಕೆ ಸಲ್ಲಿಸುವ ಪ್ರಸ್ತಾವನೆಗಳಿಗೆ ಒಪ್ಪಿಗೆ ಕೊಡಿಸಲು ಪ್ರಯತ್ನಿಸುತ್ತೇನೆ. ಕೇಂದ್ರ ಸರಕಾರದ ಯೋಜನೆಗಳು, ಕಾರ್ಯಕ್ರಮಗಳನ್ನು ರಾಜ್ಯಕ್ಕೆ ತರುವಲ್ಲಿಯೂ ಶ್ರಮಿಸುವುದಾಗಿ ಹೇಳಿದರು.

ನನ್ನ ಮೇಲೆ ನಂಬಿಕೆ ಇಟ್ಟು ಇಷ್ಟು ಮಹತ್ವದ ಜವಾಬ್ದಾರಿಯನ್ನು ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್ ನಾಯಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಹುದ್ದೆ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಮುಸ್ಲಿಮ್ ಸಮುದಾಯದ ವ್ಯಕ್ತಿಯೊಬ್ಬರಿಗೆ ಈ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ಸಿ.ಎಸ್.ನಾಡಗೌಡ ವಿಶೇಷ ಪ್ರತಿನಿಧಿಯಾಗಿದ್ದಾಗ ಸಲೀಮ್ ಅಹ್ಮದ್‌ರನ್ನು ಸಹ ಪ್ರತಿನಿಧಿಯನ್ನಾಗಿ ನೇಮಕ ಮಾಡಲಾಗಿತ್ತು ಎಂದು ಅವರು ಹೇಳಿದರು.

ಜೆಡಿಎಸ್ ಪಕ್ಷದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಕಲ್ಪಿಸುತ್ತಿಲ್ಲ ಎಂಬ ಗೊಂದಲಗಳು ಏರ್ಪಟ್ಟಿದ್ದವು. ಆದರೆ, ನನ್ನನ್ನು ಗುರುತಿಸಿ ಪಕ್ಷದ ರಾಜ್ಯ ಸಚಿವರ ಸ್ಥಾನಮಾನದ ಹುದ್ದೆಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇತರ ಮುಖಂಡರಿಗೂ ಸ್ಥಾನಮಾನ ಕಲ್ಪಿಸಲಾಗುತ್ತದೆ ಎಂದು ಮೋಹಿದ್ ಅಲ್ತಾಫ್ ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವು ಸುಭದ್ರವಾಗಿದ್ದು, ಐದು ವರ್ಷ ಆಡಳಿತ ಪೂರೈಸುತ್ತದೆ. ಈ ಬಗ್ಗೆ ಯಾರಿಗೂ ಅನುಮಾನವೇ ಬೇಡ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News