ಉಪ್ಪಾರಪೇಟೆ ಪೊಲೀಸರ ಕಾರ್ಯಾಚರಣೆ: ಮಹಿಳೆಯರಿಬ್ಬರು ಸೇರಿ 8 ಮಂದಿ ಕಳವು ಆರೋಪಿಗಳ ಸೆರೆ

Update: 2018-09-20 15:38 GMT

ಬೆಂಗಳೂರು, ಸೆ.20: ಬಸ್ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ವಸ್ತುಗಳು ಮತ್ತು ಮನೆ ಕಳವು ಮಾಡುತ್ತಿದ್ದ ಆರೋಪದಡಿ ಮಹಿಳೆಯರಿಬ್ಬರು ಸೇರಿ 8 ಜನರನ್ನು ಬಂಧಿಸುವಲ್ಲಿ ನಗರದ ಉಪ್ಪಾರಪೇಟೆ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಗಾರಪೇಟೆ ತಾಲೂಕಿನ ಬೇತಮಂಗಲ ಹೋಬಳಿ ಕಮ್ಮಸಂದ್ರದ ಚಿಗರಾಪುರ ಗ್ರಾಮದ ನಿವಾಸಿಗಳಾದ ವೆಂಕಟೇಶ್(39), ಲಕ್ಷ್ಮೀ (30), ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಸುಬ್ರಹ್ಮಣ್ಯ ಬಡಾವಣೆಯ ನಿವಾಸಿ ಮನುಕುಮಾರ್ (29). ತಮಿಳುನಾಡು ಮೂಲದ ಭಾಗ್ಯಮ್ಮ (50), ಮಾಗಡಿ ರಸ್ತೆಯ ಮಂಜ (24), ಜೀವನಪಾಳ್ಯದ ಅಮ್ಜದ್ (30), ಶಾಖಾಂಬರಿ ನಗರದ ಇಸ್ಮಾಯಿಲ್ (32) ಮತ್ತು ವಿದ್ಯಾರಣ್ಯನಗರದ ಸುರೇಶ್ (49) ಬಂಧಿತ ಆರೋಪಿಗಳು ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣವರ್ ತಿಳಿಸಿದರು.

ಆರೋಪಿಗಳ ಬಂಧನದಿಂದ ಎರಡು ಮನೆಗಳವು ಸೇರಿ ಒಟ್ಟು 28 ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳ ವಿರುದ್ಧ ಮಳವಳ್ಳಿ, ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಕುಣಿಗಲ್, ಗಿರಿನಗರ ಸೇರಿದಂತೆ ಇನ್ನೂ ಹಲವು ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ.

ಈ ಆರೋಪಿಗಳು ಬಸ್‌ನಲ್ಲಿ ಪ್ರಯಾಣಿಕರಂತೆ ಟಿಕೆಟ್ ಪಡೆದು ಪ್ರಯಾಣಿಕರ ಬ್ಯಾಗ್‌ಗಳಿಂದ ಚಿನ್ನದ ಆಭರಣಗಳನ್ನು ದೋಚುತ್ತಿದ್ದರು. ಮಾತ್ರವಲ್ಲ ಮನೆಗಳಲ್ಲೂ ಆಭರಣ ಕಳವು ಮಾಡುತ್ತಿದ್ದುದಾಗಿ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಂದ 37.65 ಲಕ್ಷ ರೂ. ಬೆಳೆಬಾಳುವ ಒಂದು ಕೆಜಿ 255 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಆರೋಪಿಗಳಾದ ಇಸ್ಮಾಯಿಲ್ ಮತ್ತು ಸುರೇಶ್ ಎಂಬವರಿಂದ 3 ಜೇಬುಗಳವು ಪ್ರಕರಣಗಳಿಗೆ ಸಂಬಂಧಿಸಿ 3.9 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣವರ್ ಅವರ ಮಾರ್ಗದರ್ಶನದಲ್ಲಿ ಚಿಕ್ಕಪೇಟೆ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಿರಂಜನ್ ರಾಜ್ ಅರಸ್ ಅವರ ನೇತೃತ್ವದಲ್ಲಿ ಎಸ್ಸೈ ಟಿ.ಡಿ. ಸತೀಶ್ ಕುಮಾರ್, ಪಿಎಸ್ಸೈ ಶಿವಾನಂದ ಗುಡಗನಟ್ಟಿ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News