ನಗರದ 899 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ: ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ ಬಿಬಿಎಂಪಿ

Update: 2018-09-20 15:42 GMT

ಬೆಂಗಳೂರು, ಸೆ.20: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ 2172 ಗುಂಡಿಗಳ ಪೈಕಿ 899 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಪ್ರಮಾಣ ಸಲ್ಲಿಸಿದೆ.

ವಿಜಯನ್ ಮೆನನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಬಿಬಿಎಂಪಿ ಪರ ವಾದಿಸಿದ ವಕೀಲ ಶ್ರೀನಿಧಿ ಅವರು, ಬಿಬಿಎಂಪಿ ಬುಧವಾರ ತಡ ರಾತ್ರಿವರೆಗೆ ಕೆಲಸ ಮಾಡಿ 899 ರಸ್ತೆ ಗುಂಡಿಗಳನ್ನು ಮುಚ್ಚಿದೆ. ಹಾಗೂ ಈ ಎಲ್ಲ ಮಾಹಿತಿಯನ್ನು ಪೆನ್‌ಡ್ರೈವ್‌ನಲ್ಲಿ ಹಾಕಿಕೊಂಡು ಬರಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಾದಿಸಿದ ವಕೀಲೆ ಎಸ್.ಆರ್.ಅನುರಾಧ ಅವರು, ತಡರಾತ್ರಿಯವರೆಗೆ ಕೆಲಸ ಮಾಡಿ 899 ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ ಎನ್ನುವುದು ತಮಗೆ ಸಂದೇಹ ಬರುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಪರ ವಕೀಲರು, ಈ ಎಲ್ಲ ಮಾಹಿತಿಯನ್ನು ಪೆನ್‌ಡ್ರೈವ್‌ನಲ್ಲಿ ಹಾಕಿಕೊಂಡು ಬಂದಿದ್ದೇವೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಸೆ.24ರಂದು ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಂಡಿರುವ ಬಗ್ಗೆ ಮೆಷರ್‌ಮೆಂಟ್ ಬುಕ್ಸ್(ಅಳತೆ ಪುಸ್ತಕ)ನ ಮೊದಲನೆಯ ಪುಟ ಹಾಗೂ ಕೊನೆಯ ಪುಟದ ಫೋಟೋವನ್ನು ತೆಗೆದು ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ಸಲ್ಲಿಸಬೇಕೆಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು. ಎಎಜಿ ಪೊನ್ನಣ್ಣ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News