ಬೆಂಗಳೂರು: ನಮ್ಮ ಮೆಟ್ರೋ ಆದಾಯ ಹೆಚ್ಚಳ

Update: 2018-09-20 15:47 GMT

ಬೆಂಗಳೂರು, ಸೆ.20: ನಮ್ಮ ಮೆಟ್ರೋದ ಆದಾಯ ಪ್ರತಿ ತಿಂಗಳು ಏರಿಕೆಯಾಗುತ್ತಿದ್ದು, 2017 ಜುಲೈನಿಂದ 2018 ರ ಜುಲೈವರೆಗೂ ಐದು ಕೋಟಿ ರೂ.ಗಳಷ್ಟು ಆದಾಯ ಹೆಚ್ಚಳವಾಗಿದೆ.

ಬಿಎಂಆರ್‌ಸಿಎಲ್ ಮೊದಲ ಹಂತದ ಮೆಟ್ರೋ ಸೇವೆಯನ್ನು 2011 ರಲ್ಲಿ ರಾಜಧಾನಿಗೆ ಪರಿಚಯಿಸಿತು. ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿವರೆಗೂ ಮೊದಲ ರೈಲು ಸಂಚಾರ ಮಾಡಿತು. ಈ ಸಂದರ್ಭದಲ್ಲಿ ವಾರ್ಷಿಕವಾಗಿ ಸುಮಾರು 41 ಲಕ್ಷ ಜನ ಸಂಚಾರ ನಡೆಸಿದ್ದರು. ಅನಂತರ 2017 ರ ಜೂನ್‌ನಲ್ಲಿ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗೂ ಮೊದಲನೇ ಹಂತದ ಮಾರ್ಗ ಸಂಪೂರ್ಣ ಸಂಚಾರ ಮುಕ್ತವಾಯಿತು. ಅನಂತರ ಪ್ರಯಾಣಿಕರ ಸಂಖ್ಯೆ ಅಧಿಕಗೊಂಡಿದ್ದು, ಆದಾಯವೂ ಹೆಚ್ಚಾಗಿದೆ.

2017ರ ಜುಲೈನಲ್ಲಿ ಟಿಕೆಟ್ ಮಾರಾಟದಿಂದ 25.14 ಕೊಟಿ ರೂ. ಆದಾಯ ಹಾಗೂ ಜಾಹೀರಾತು ಸೇರಿ ಇತರೆ ಆದಾಯ ಅಂದಾಜು 7 ಕೊಟಿ ರೂ.ಗಳು ಸಂಗ್ರಹಗೊಂಡಿದ್ದು, ಒಟ್ಟಾರೆಯಾಗಿ 32.1 ಕೋಟಿ ಆದಾಯ ನಿಗಮಕ್ಕೆ ಬಂದಿತ್ತು. ಆದರೆ, 2018 ರ ಜುಲೈಗೆ ಹೋಲಿಕೆ ಮಾಡಿದ ಅಂದಾಜಿನಂತೆ ಟಿಕೆಟ್ ಮಾರಾಟದಿಂದ 30.51 ಕೋಟಿ ರೂ.ಗಳು ಹಾಗೂ ಜಾಹೀರಾತು ಸೇರಿದಂತೆ ಮತ್ತಿತರೆ ಆದಾಯ ಮೂಲಗಳಿಂದ 4.5 ಕೋಟಿ ಸೇರಿದಂತೆ ಒಟ್ಟಾರೆಯಾಗಿ 34.90 ಕೊಟಿ ರೂ.ಗಳು ಆದಾಯ ಬಂದಿದ್ದು, ಸುಮಾರು ಎರಡು ಕೋಟಿಯಷ್ಟು ಹೆಚ್ಚು ಆದಾಯ ಬಂದಿದೆ.

ನಮ್ಮ ಮೆಟ್ರೊದಲ್ಲಿ ಪ್ರತಿ ಕಿ.ಮಿ.ಗೆ 10 ಸಾವಿರ ಜನ ಪ್ರಯಾಣಿಸುತ್ತಿದ್ದಾರೆ. ಪ್ರತಿ ಕಿ.ಮಿ.ಗೆ ಪ್ರಯಾಣಿಕರ ಸಂಖ್ಯೆ 10 ಸಾವಿರ ದಾಟಿದರೆ, ಇಂತಹ ಮೆಟ್ರೊವನ್ನು ಅತಿ ದಟ್ಟಣೆಯ ಮೆಟ್ರೊ ಎಂದು ಪರಿಗಣಿಸಲಾಗುತ್ತಿದೆ. 2017ರ ಸೆ.28ರಂದು 4.10 ಲಕ್ಷ ಜನ ನಮ್ಮ ಮೆಟ್ರೊ ಬಳಸಿರುವುದು ದಾಖಲೆಯಾಗಿತ್ತು. 6 ಬೋಗಿ ರೈಲು ಸಂಚಾರ ಮುಕ್ತವಾದ ಬಳಿಕ 2018ರ ಜು.2ರಂದು 3.95 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು ಹೊಸ ದಾಖಲೆಯಾಗಿತ್ತು. ಆದರೆ, ಆಗಸ್ಟ್‌ನಲ್ಲಿ ಎರಡು ಬಾರಿ ಪ್ರಯಾಣಿಕರ ಸಂಖ್ಯೆ ದಾಖಲೆ ಪಟ್ಟಿ ಸೇರಿದೆ. ಆ.10ರಂದು ನಮ್ಮ ಮೆಟ್ರೊದಲ್ಲಿ 4.23 ಲಕ್ಷ ಜನ ಪ್ರಯಾಣಿಸಿದ್ದರು. ಆ.13ರಂದು 4.25 ಲಕ್ಷ ಪ್ರಯಾಣಿಕರು ಮೆಟ್ರೊದಲ್ಲಿ ಪ್ರಯಾಣಿಸಿದ್ದಾರೆ. ಇದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News