ಪಕ್ಷ ಅಸ್ಥಿರಗೊಳಿಸಲು ಬಿಜೆಪಿ ಯತ್ನ: ದಿನೇಶ್ ಗುಂಡೂರಾವ್

Update: 2018-09-20 17:19 GMT

ಬೆಂಗಳೂರು, ಸೆ.20: ಇದುವರೆಗೂ ನಮ್ಮ ಪಕ್ಷದ ಯಾವೊಬ್ಬ ಶಾಸಕನೂ ಪಕ್ಷ ಬಿಡುವ ಮಾತು ಆಡಿಲ್ಲ. ಆದರೂ ಮಾಧ್ಯಮಗಳಲ್ಲಿ ಸತ್ಯಕ್ಕೆ ದೂರವಾದ ಮಾಹಿತಿ ಪ್ರಕಟವಾಗುತ್ತಿದೆ. ಅಂತಹ ಸ್ಥಿತಿ ಇಲ್ಲವೇ ಇಲ್ಲ. ಮಾಧ್ಯಮಗಳು ಜವಾಬ್ದಾರಿ ಅರಿತು ವರದಿ ಪ್ರಕಟಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಾರೂ ಎಲ್ಲೂ ಹೋಗಲ್ಲ. ಬಳ್ಳಾರಿಯ ನಾಲ್ವರು ಶಾಸಕರು ನಮ್ಮೊಂದಿಗೆ ದಿಲ್ಲಿಯಲ್ಲಿದ್ದರು. ಎಲ್ಲೋ ಸರಕಾರವನ್ನು ಹಾದಿ ತಪ್ಪಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಇದಕ್ಕೆ ಕೆಲ ಮಾಧ್ಯಮ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಶಾಸಕ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್ ಮತ್ತಿತರ ಯಾವುದೇ ಶಾಸಕರು ಪಕ್ಷ ಬಿಡಲ್ಲ. ಎಲ್ಲೂ ಹೋಗಿಲ್ಲ. ಅನಗತ್ಯ ಹಾಗೂ ತಪ್ಪುಮಾಹಿತಿಗಳು ರವಾನೆಯಾಗುತ್ತಿದ್ದು, ಇದು ನಿಲ್ಲಬೇಕು ಎಂದು ಕೋರಿದರು.

ಉಡಾಫೆ ಹೇಳಿಕೆ ನೀಡಿದರೆ ಕ್ರಮ: ಶಾಸಕರು ಉಡಾಫೆಯ, ಪಕ್ಷ ವಿರೋಧಿ ಹೇಳಿಕೆ ನೀಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ದಿನೇಶ್ ಗುಂಡೂರಾವ್ ಖಡಕ್ ಎಚ್ಚರಿಕೆಯನ್ನು ರವಾನಿಸಿದರು.

ಮಾಧ್ಯಮ ಪ್ರಶ್ನೆ: ಮಾಧ್ಯಮಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿ ಎಂದು ದಿನೇಶ್ ಗುಂಡೂರಾವ್ ಹೇಳುತ್ತಿದ್ದಂತೆ ಮಾಧ್ಯಮದವರು ಪ್ರತಿರೋಧ ವ್ಯಕ್ತಪಡಿಸಿದರು. ಮಾಧ್ಯಮಗಳ ಸಮಜಾಯಿಷಿ ಹಾಗೂ ಕೆಲ ಶಾಸಕರು ನೀಡಿದ ವಿವರದ ಮಾಹಿತಿ ನೀಡಿದಾಗ, ಕೆಲ ಮಾಧ್ಯಮಗಳನ್ನು ಮಾತ್ರ ಉದ್ದೇಶಿಸಿ ಈ ಮಾತನ್ನಾಡಿದ್ದೇನೆ. ಅವರು ಬಿಜೆಪಿಯ ಮುಖವಾಣಿಯಂತೆ ವರದಿ ಮಾಡುವುದನ್ನು ನಿಲ್ಲಿಸಲಿ. ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಪ್ರತಿಬಿಂಬಿಸುವ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ನಮ್ಮ ಕಾರ್ಯನಿರ್ವಹಣೆಯಲ್ಲಿ ಲೋಪವಿದ್ದರೆ ಅದನ್ನು ಮಾಧ್ಯಮಗಳು ಎತ್ತಿ ತೋರಿಸಲಿ. ಅದರ ಬದಲು ಶಾಸಕರು ಮಹಾರಾಷ್ಟ್ರಕ್ಕೆ ತೆರಳುತ್ತಾರೆ, ಅತೃಪ್ತಿ, ಅಸಮಾಧಾನ, ಪಕ್ಷ ಬಿಡುತ್ತಾರೆ ಎಂಬಿತ್ಯಾದಿ ಆಧಾರರಹಿತ ವರದಿ ಮಾಡುವುದನ್ನು ನಿಲ್ಲಿಸಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News