ವಿಚಾರಣೆ ಪೂರ್ಣಗೊಳಿಸಲು 2 ತಿಂಗಳ ಕಾಲಾವಕಾಶ: ಹೈಕೋರ್ಟ್ ಆದೇಶ

Update: 2018-09-20 17:22 GMT

ಬೆಂಗಳೂರು, ಸೆ.20: ಬೆಂಗಳೂರು ಸರಣಿ ಬಾಂಬ್ ಸ್ಫೋಟ(2008) ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಅಧೀನ ನ್ಯಾಯಾಲಯಕ್ಕೆ 2 ತಿಂಗಳ ಕಾಲಾವಕಾಶ ವಿಸ್ತರಿಸಿ ಹೈಕೋರ್ಟ್ ಗುರುವಾರ ಆದೇಶಿಸಿದೆ. 

ಅಧೀನ ನ್ಯಾಯಾಲಯ ವಿಚಾರಣೆ ತರಾತುರಿಯಲ್ಲಿ ನಡೆಸಿದರೆ ತನಗೆ ನ್ಯಾಯ ಸಿಗುವುದಿಲ್ಲ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಪ್ರಕರಣದ 24ನೆ ಆರೋಪಿ ಕೇರಳದ ಕಣ್ಣೂರು ನಿವಾಸಿ ಸಮೀರ್, ವಿಚಾರಣೆ ಪೂರ್ಣಗೊಳಿಸಲು 6 ತಿಂಗಳು ಕಾಲಾವಕಾಶ ನೀಡಬೇಕು ಎಂದು ಕೋರಿದ್ದರು. ಗುರುವಾರ ಈ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಆರ್.ಬಿ. ಬೂದಿಹಾಳ ಹಾಗೂ ನ್ಯಾ. ಕೆ.ಎಸ್. ಮುದುಗಲ್ ಅವರಿದ್ಧ ವಿಭಾಗೀಯ ನ್ಯಾಯಪೀಠ, ಅರ್ಜಿದಾರನ ಮನವಿಯಂತೆ 6 ತಿಂಗಳ ಕಾಲಾವಕಾಶ ವಿಸ್ತರಿಸಲು ನಿರಾಕರಿಸಿ ಎರಡು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಅಧೀನ ನ್ಯಾಯಾಲಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.

ಈ ಹಿಂದೆ ಪ್ರಕರಣದಲ್ಲಿ ಜಾಮೀನು ಕೋರಿ ಸಮೀರ್ ಅಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ, ಅಧೀನ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಮೀರ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ. ನಾನು ಆರೋಪಿ ಎಂದು ಸಾಬೀತುಪಡಿಸುವ ಯಾವ ಸಾಕ್ಷಾಧಾರಗಳಿಲ್ಲ. ಈಗಾಗಲೇ ನಾನು ಏಳೆಂಟು ವರ್ಷ ನ್ಯಾಯಾಂದ ಬಂಧನದಲ್ಲಿ ಕಳೆದಿದ್ದೇನೆ. ನನಗೆ ಜಾಮೀನು ಕೊಡಬೇಕು ಎಂದ ಆತ ಮನವಿ ಮಾಡಿದ್ದ. ಆದರೆ, ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದ್ದು, ಇದೊಂದು ಗಂಭೀರ ಪ್ರಕರಣವಾಗಿದ್ದು ತಪ್ಪಿತಸ್ಥರಿಗೆ ಮರಣ ದಂಡನೆ ಶಿಕ್ಷೆ ವಿಧಿಸುವಂತಹ ಪ್ರಕರಣವಿದು. ತನಿಖೆ ಇನ್ನೂ ಪ್ರಕರಣದಲ್ಲಿ ಈಗಾಗಲೇ ಅಧೀನ ನ್ಯಾಯಾಲಯ 2,280 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಇನ್ನೂ 9 ಸಾಕ್ಷಿಗಳ ವಿಚಾರಣೆ ಬಾಕಿ ಇದೆ. ಈ ಹಂತದಲ್ಲಿ ಆರೋಪಿಯ ಪಾತ್ರವಿಲ್ಲ ಎಂದು ಹೇಳಲಿಕ್ಕಾಗುವುದಿಲ್ಲ. ಹೀಗಾಗಿ, ಜಾಮೀನು ಕೊಡಬಾರದು ಎಂದು ತನಿಖಾಧಿಕಾರಿಗಳು ಮನವಿ ಮಾಡಿದ್ದರು.

2008ರ ಜುಲೈ 27ರಂದು ಬೆಂಗಳೂರಿನ ವಿವಿಧ 8 ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು. ಈ ಸಂಬಂಧ ಹಲವರನ್ನು ಬಂಧಿಸಿದ್ದ ಪೊಲೀಸರು 2011ರ ಜ.26ರಂದು ಸಮೀರ್‌ನನ್ನು ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ತಮ್ಮ ವಶಕ್ಕೆ ಪಡೆದಿದ್ದರು. ಆಗಿನಿಂದ ಸಮೀರ್ ನ್ಯಾಯಾಂಗ ವಶದಲ್ಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News