ಯಡಿಯೂರಪ್ಪ ನಿವಾಸದ ಎದುರು ಪ್ರತಿಭಟಿಸಿದ ಕೈ ಕಾರ್ಯಕರ್ತರು ಪೊಲೀಸ್ ವಶಕ್ಕೆ

Update: 2018-09-20 17:33 GMT

ಬೆಂಗಳೂರು, ಸೆ.20: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ 11ಕ್ಕೂ ಹೆಚ್ಚು ಕಾರ್ಯಕರ್ತರನ್ನು ಇಲ್ಲಿನ ಸದಾಶಿವನಗರ ಠಾಣಾ ಪೊಲೀಸರು ವಶಕ್ಕೆ ಪಡೆದರು.

ಸಿಬಿಐ ಸೇರಿದಂತೆ ಹಲವು ಸರಕಾರಿ ಸ್ವಾಮ್ಯದ ತನಿಖಾ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರನ್ನು ಬೆದರಿಸುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆ ಡಾಲರ್ಸ್ ಕಾಲನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮುಂಭಾಗ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಮನೆಯೊಳಗೆ ನುಗ್ಗಲು ಯತ್ನಿಸಿದರು ಎನ್ನಲಾಗಿದೆ. ಈ ಸಂಬಂಧ ಮುಖಂಡರು ದೂರು ನೀಡಿದ ಹಿನ್ನೆಲೆ ಕೆಲವರನ್ನು ವಶಕ್ಕೆ ಪಡೆಯಲಾಯಿತು.

ಕಾಂಗ್ರೆಸ್ ಮುಖಂಡರಾದ ಎಸ್.ಮನೋಹರ್, ಜಿ.ಜನಾರ್ಧನ್, ಆನಂದ್, ಆದಿತ್ಯ, ಹೇಮರಾಜ, ಸಲೀಂ ಸೇರಿದಂತೆ ಹಲವರನ್ನು ವಶಕ್ಕೆ ಪಡೆದ ಸದಾಶಿವನಗರ ಠಾಣಾ ಪೊಲೀಸರು, ಕೆಲ ಸಮಯದ ಬಳಿಕ ಬಿಡುಗಡೆ ಮಾಡಿದರು.

ಈ ಕುರಿತು ಮಾತನಾಡಿದ ಎಸ್.ಮನೋಹರ್, ಡಾಲರ್ಸ್ ಕಾಲನಿ ವ್ಯಾಪ್ತಿಗೆ ಒಳಪಡುವ ಪೊಲೀಸ್ ಠಾಣೆಗಳಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಪ್ರತಿಭಟನೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News