ಮಂಗಳೂರು ಬಂದರಿನಲ್ಲಿರುವ ಮಲೇಷ್ಯಾ ಮರಳು ಟ್ರಕ್ ಗಳಲ್ಲಿ ಮಾರಾಟ ಮಾಡಲು ಸಚಿವ ಸಂಪುಟ ಒಪ್ಪಿಗೆ

Update: 2018-09-20 17:46 GMT

ಬೆಂಗಳೂರು, ಸೆ.30: ಮಂಗಳೂರು ಬಂದರಿನಲ್ಲಿರುವ ಮಲೇಷ್ಯಾ ಮರಳನ್ನು ಚೀಲದ ಬದಲಿಗೆ ಟ್ರಕ್ ಗಳಲ್ಲಿ ಮಾರಾಟ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇದೀಗ 1 ಲಕ್ಷ ಟನ್ ನಷ್ಟು ಮರಳು ದಾಸ್ತಾನಿದ್ದು, ಕೇವಲ 500 ಟನ್ ಮಾತ್ರ ಮಾರಾಟ ಮಾಡಲು ಎಂಎಸ್ಐಎಲ್ ನಿಂದ ಸಾಧ್ಯವಾಗಿದೆ. 
ಬ್ಯಾಗ್ ನಲ್ಲಿ ಮಾರುತ್ತಿರುವುದು ಮತ್ತು ಒಂದೇ ಸಂಸ್ಥೆ ಮಾರಾಟ ಮಾಡುತ್ತಿರುವ ಕಾರಣ ಬೆಲೆ ಹೆಚ್ಚಿದೆ. ಖರೀದಿಗೆ ಯಾರೂ ಬಾರದಿರುವ ಕಾರಣ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಬೆಲೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ತೀರ್ಮಾನ ಮಾಡಲಾಗಿದೆ. 

ಬ್ಯಾಗ್ ಬದಲಿಗೆ ಜಿಪಿಎಸ್ ಅಳವಡಿಸಿ ಟ್ರಕ್ ಗಳಲ್ಲಿ ಮಾರಾಟ ಮಾಡಲು ಸಂಪುಟ ಅನುಮತಿ ನೀಡಿದೆ. ಬೇರೆ ರಾಜ್ಯಗಳಿಗೆ ಮಲೇಷ್ಯಾ ಮರಳು ಸಾಗಿಸಲು ಮಂಗಳೂರು ಬಂದರು ಉಪಯೋಗಿಸಲು ಸಂಪುಟ ಸಭೆ ಅನುಮತಿ ನೀಡಿದೆ. ಈಗಿರುವ ಮರಳು ದಾಸ್ತಾನನ್ನು ರಾಜ್ಯಕ್ಕೆ ಮಾತ್ರ ಬಳಸಬೇಕು. ಮುಂದೆ ಬರುವ ಆಮದನ್ನು ಸಾಗಿಸಲು ಅನುಮತಿ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಕರಾವಳಿ ನದಿ ಅಧ್ಯಯನ: ಕರಾವಳಿಯಲ್ಲಿ ಹರಿಯುವ ನದಿಗಳನ್ನು‌ ಅಧ್ಯಯನ ನಡೆಸಲು ಸಂಪುಟ ಒಪ್ಪಿಗೆ ನೀಡಿದೆ. ಈ‌ ವರ್ಷ ಸಾಕಷ್ಟು ಮಳೆ ಬಂದಿದೆ.‌ ಆದರೂ ಕಳೆದ ವರ್ಷ ಸುಮಾರು 21 ಅಡಿ ಇದ್ದ ನದಿ ಹರಿವು ಈ ಬಾರಿ 12-13 ಅಡಿಗೆ ಕುಸಿದಿದೆ. ಈ ಅಗಾಧ ಬದಲಾವಣೆಗೆ ಕಾರಣ ಹಾಗೂ ಭವಿಷ್ಯದ ಬಗ್ಗೆ ಅಧ್ಯಯನ ‌ನಡೆಸಲು ತಜ್ಞರ ಸಮಿತಿ ನೇಮಿಸಲು ಸಮ್ಮತಿ‌ ಸೂಚಿಸಲಾಗಿದೆ.

ಮುಂಬಡ್ತಿ ಮೀಸಲಾತಿ ಸಂಕಷ್ಟ: ಕಾನೂನು ಮಾಡಿದರೂ ಮುಂಬಡ್ತಿ ಮೀಸಲಾತಿ ವಿಚಾರ ಬಗೆ ಹರಿಯದಿರುವುದು ಸಂಪುಟದಲ್ಲಿ ಸುದೀರ್ಘ ಚರ್ಚೆ ಆಗಿದೆ. ರಾಷ್ಟ್ರಪತಿ ಅಂಕಿತ ನೀಡಿದ್ದರೂ, ಮುಂಬಡ್ತಿ‌ ಮೀಸಲು ರಕ್ಷಿಸುವ ಕಾಯ್ದೆ ಜಾರಿ ಆಗುತ್ತಿಲ್ಲ. ಜಾರಿ ಮಾಡಿದರೆ ನ್ಯಾಯಾಂಗ ನಿಂದನೆ ಅಪಾಯವಿದೆ. ಜಾರಿ ಮಾಡದಿದ್ದರೆ ನಮ್ಮದೇ ಕಾಯ್ದೆಯನ್ನು ಶಿತಲೀಕರಣದಲ್ಲಿ ಇರಿಸಿದಂತಾಗುತ್ತದೆ. ಈ ಬಗ್ಗೆ ಸಧ್ಯದಲ್ಲೆ ಸಿಎಂ, ಡಿಸಿಎಂ ಹಾಗೂ ಅಡ್ವೋಕೇಟ್ ಜನರಲ್ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಸಂಪುಟ ತೀರ್ಮಾನಗಳು
-ರಾಜ್ಯದಲ್ಲಿ ಸಿರಿಧಾನ್ಯ‌ ಬೆಳೆ ವಿಸ್ತೀರ್ಣವನ್ನು 60 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚಿಸುವ ಅಂದಾಜು 24 ಕೋಟಿ ರೂ. ಯೋಜನೆಗೆ ಒಪ್ಪಿಗೆ.

-14 ಸಾವಿರ ಹಾಲು ಒಕ್ಕೂಟದ ಸಿಬ್ಬಂದಿಗೆ ಗುಣಮಟ್ಟದ ಹಾಲು ಸಂಗ್ರಹಕ್ಕಾಗಿ ಪ್ರತಿ ಲೀಟರ್ ಗೆ 20 ಪೈಸೆ ಪ್ರೋತ್ಸಾಹ ಧನ ನೀಡಲು ಒಪ್ಪಿಗೆ. ಈ ಯೋಜನೆಗೆ 27.5 ಕೋಟಿ ರೂ.‌ಅನುದಾನ ಮಂಜೂರು.

-ಹಾಸನ ಜಿಲ್ಲೆಯಲ್ಲಿ 473 ಕೋಟಿ ರೂ.‌ಅಂದಾಜಿನಲ್ಲಿ ನಿರ್ಮಾಣವಾಗುವ 10-15 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿಗೆ 50 ಕೋಟಿ ರೂ.‌ಅನುದಾನ.

-ಆರ್ಯವೈಷ್ಯ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪ್ರವೇಶ ಪಡೆಯಲು ಜಾತಿ ದೃಢೀಕರಣ ಪತ್ರ ನೀಡಿಕೆ.

-ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ 371ಜೆ ಜಾರಿ ಕುರಿತು ಹಿರಡಿಸಲಾಗಿರುವ ಆದೇಶಗಳ ಪ್ರಗತಿ ಪರಿಶೀಲನೆಗೆ ರಚಿಸಿರುವ ಸಂಪುಟ ಉಪಸಮಿತಿಗೆ ಘಟನೋತ್ತರ ಅನುಮೋದನೆ.

-ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ 16.15 ಕೋಟಿ ರೂ.‌ಮೊತ್ತದಲ್ಲಿ ಸ್ಥಾಪನೆಯಾಗಲಿರುವ ಮಹಿಳಾ ಪಾಲಿಟೆಕ್ನಿಕ್ ಗೆ ಆಡಳಿತಾತ್ಮಕ ಅನುಮೋದನೆ.

ದಂಗೆ ಕುರಿತು ಸಿಎಂ ಸ್ಪಷ್ಟನೆ:
ಸರ್ಕಾರದ ವಿರುದ್ಧ ದಂಗೆ ಹೇಳಿಕೆ ಕುರಿತು ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ದಂಗೆ ಅಂದ್ರೆ ಜನ ಪ್ರತಿಭಟನೆ ಮಾಡುತ್ತಾರೆ ಅಂತ. ಇದರಲ್ಲಿ ತಪ್ಪೇನಿದೆ? ಯಡಿಯೂರಪ್ಪ ಈ ಹಿಂದೆ ಸರಕಾರ ವಿರುದ್ದ ದೊಣ್ಣೆ, ಬಡಿಕೆ ಇಟ್ಟುಕೊಂಡು ಪ್ರತಿಭಟನೆ ಮಾಡ್ತೀವಿ ಅಂತ ಹೇಳಿದ್ರು. ಇದಕ್ಕಿಂತ ಕೆಟ್ಟ ಪದವನ್ನು ನಾನು ಬಳಸಿದ್ದೇನಾ? ಬಿಜೆಪಿ ಮುಖಂಡರು ಅಂಡರ್ ವರ್ಲ್ಡ್ ಸಂಪರ್ಕ ಇಟ್ಟುಕೊಂಡು ಸರಕಾರ ಕೆಡವಲು ಮುಂದಾದರೆ ನಾನು ಸುಮ್ಮನೆ ಕೂರಬೇಕಾ? ರಾಜ್ಯಪಾಲರಿಗೆ ಮಾತ್ರವಲ್ಲ ರಾಷ್ಟ್ರಪತಿಗಳಿಗೆ ಬೇಕಿದ್ರೂ ಬಿಜೆಪಿಯವರು ದೂರು ನೀಡಲಿ. ನಾನು ಹೆದರೋದಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News