ಸಮುದಾಯ ಭವನಗಳು ಉಚಿತವಾಗಿ ದೊರೆಯಲಿ

Update: 2018-09-20 18:34 GMT

ಮಾನ್ಯರೇ,

ಕರ್ನಾಟಕ ಸರಕಾರವು ಎಲ್ಲಾ ಸಮುದಾಯಗಳಿಗೂ ಸಭಾಭವನ ನಿರ್ಮಾಣ ಮಾಡಲು, ಅದಕ್ಕೆಂದೇ ಮೀಸಲಾದ ನಿಧಿ, ಯೋಜನೆಗಳಿಂದ ಲಕ್ಷಾಂತರ ರೂ. ಅನುದಾನಗಳನ್ನು ನೀಡುತ್ತದೆ. ಇದೊಂದು ಒಳ್ಳೆಯ ಬೆಳವಣಿಗೆಯೂ ಹೌದು. ಇದರಿಂದ ಸಮಾಜಕ್ಕೆ ಸಾಂಸ್ಕೃತಿಕ, ಸಾಮಾಜಿಕ, ಸಾಂಪ್ರದಾಯಿಕ ಚಟುವಟಿಕೆಗಳನ್ನು ನಡೆಸಲು ಸೂರಿನ ಅವಕಾಶವಾಗುತ್ತದೆ. ಅನುದಾನ ನೀಡುವ ಪ್ರಕ್ರಿಯೆಯು ಒಂದರ್ಥದಲ್ಲಿ ರಾಜ್ಯದ ಪ್ರಜೆಗಳಿಂದ ಕರ ಸಂಗ್ರಹವನ್ನು ಕ್ರೋಡೀಕರಿಸಿ, ಸರಕಾರ ನೀಡುವ ಪ್ರಜೆಗಳ ದೇಣಿಗೆ ಎಂದು ಕರೆಯ ಬಹುದು. ಇದರಲ್ಲಿ ಸರ್ವ ಸಮುದಾಯಗಳ ಹಣವೂ ಜೋಡಣೆಗೊಂಡಿರುತ್ತದೆ.
 ಪ್ರಜಾದೇಣಿಗೆಯ ಸಹಕಾರದಿಂದ ನಿರ್ಮಿಸಲ್ಪಟ್ಟ ಸಾವಿರಾರು ಸಮುದಾಯ ಭವನಗಳು ರಾಜ್ಯದಲ್ಲಿವೆ. ಇಂತಹ ಸಭಾಭವನಗಳು ವಾಣಿಜ್ಯೀಕರಣಕ್ಕೆ ಒತ್ತು ಕೊಟ್ಟಿರುವ ನಿರ್ದೇಶನಗಳು ಬಹಳ ಇವೆ. ಇಂತಹ ಸಭಾಭವನಗಳ ಮೇಲ್ವಿಚಾರಣೆ ನೋಡಿಕೊಳ್ಳುವ ಆಡಳಿತ ಮಂಡಳಿಯವರು ವಿವಿಧ ಸಂಘ ಸಂಸ್ಥೆ, ಇಲಾಖೆಗಳಿಂದ ನಡೆಯುವ ಸಮಾಜಮುಖಿ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಿ ಸಹಕರಿಸ ಬೇಕು. ಆಗ ಸರಕಾರವು ಸಮುದಾಯ ಭವನ ನಿರ್ಮಾಣದ ಸಂದರ್ಭ ನೀಡಿದ ಆರ್ಥಿಕ ನೆರವಿಗೆ ಅರ್ಥ ಬರುತ್ತದೆ.
ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು, ಆಕಾಡಮಿಗಳ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು, ಕನ್ನಡ ನಾಡು ನುಡಿ ಸಂಸ್ಕೃತಿಗೆ ಸಂಬಂಧಿತ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು ನಡೆಯುವಾಗ ಸಭಾಭವನಗಳಿಗೆ ಮೇಲ್ವಿಚಾರಕರು ಸೂಚಿಸಿದ ಬಾಡಿಗೆಯನ್ನು ನೀಡ ಬೇಕಾದ ಪರಿಸ್ಥಿತಿ ರಾಜ್ಯದಲ್ಲಿದೆ. ಹಾಗಾಗ ಬಾರದು. ಕೊನೆ ಪಕ್ಷ ವಿನಾಯತಿ ದರದಲ್ಲಾದರೂ, ನಿರ್ವಹಣೆ ವೆಚ್ಚ ಭರಿಸುವ ಕ್ರಮದಲ್ಲಾದರೂ ಸಹಕರಿಸ ಬೇಕಾಗುತ್ತದೆ. ಹಾಗಾಗಿ ಸರಕಾರವು ಮುಂದಾದರೂ ಸಮುದಾಯ ಭವನಗಳಿಗೆ ಅನುದಾನ ನೀಡುವಾಗ ಸಾಮಾಜಿಕ ಕಾರ್ಯಕ್ರಮಗಳಿಗೆ ಉಚಿತ ಅಥವಾ ಬಾಡಿಗೆ ವಿನಾಯಿತಿ ನೀಡುವಂತೆ ಕಾನೂನು ರೂಪಿಸಬೇಕಾಗಿದೆ.

Writer - -ತಾರಾನಾಥ್ ಮೇಸ್ತ, ಶಿರೂರು

contributor

Editor - -ತಾರಾನಾಥ್ ಮೇಸ್ತ, ಶಿರೂರು

contributor

Similar News