ನಮ್ಮ ಶಾಸಕರು ಕೋಮುವಾದಿಗಳೊಂದಿಗೆ ಕೈಜೋಡಿಸುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-09-21 13:32 GMT

ಬೆಂಗಳೂರು, ಸೆ. 21: ‘ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕನೂ ಮುಂಬೈಗೆ ಹೋಗಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಸುಭದ್ರವಾಗಿದೆ. ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಿ ಕೋಮುವಾದಿಗಳೊಂದಿಗೆ ಕೈಜೋಡಿಸುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ರಧಾನಿ ಮೋದಿಯವರು ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರ ಖಾತೆಗೆ ಹಾಕುತ್ತೇನೆಂದು ಹೇಳಿದ್ದ ಮೊತ್ತದ ನೂರು ಪಟ್ಟು ಹೆಚ್ಚು ಹಣ ನೀಡುತ್ತೇವೆ ಎಂದು ನಮ್ಮ ಶಾಸಕರಿಗೆ ಬಿಜೆಪಿಯವರು ಆಮಿಷವೊಡ್ಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರು ಬಿಜೆಪಿ ಆಮಿಷಕ್ಕೆ ಬಲಿ ಆಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಕಾಂಗ್ರೆಸ್-ಜೆಡಿಎಸ್‌ನ 18ಕ್ಕೂ ಹೆಚ್ಚು ಶಾಸಕರನ್ನು ಮುಂಬೈ ವಿಮಾನ ಹತ್ತಿಸುವುದು ಖಚಿತ, ಸರಕಾರ ಬಿದ್ದೇ ಬೀಳುತ್ತದೆ ಎಂಬ ಬಿಜೆಪಿ ಮುಖಂಡರ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ.

ಸಿದ್ಧಾಂತದ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರು ಅಧಿಕಾರಕ್ಕಾಗಿ ಹೀನ ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಚುನಾವಣೆಯಲ್ಲಿ ಸೋತವರು ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸುವ ಅನೈತಿಕ ಪ್ರಯತ್ನ ಮಾಡಬಾರದು. ಬಿಜೆಪಿಯವರ ನಡವಳಿಕೆಗಳನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅವರು ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News