ನಾವು ನೋಡಿಕೊಂಡು ಸುಮ್ಮನೆ ಕೂರಬೇಕೇ?: ಆಪರೇಷನ್ ಕಮಲಕ್ಕೆ ಡಾ.ಜಿ.ಪರಮೇಶ್ವರ್ ಆಕ್ಷೇಪ

Update: 2018-09-21 13:42 GMT

ಬೆಂಗಳೂರು, ಸೆ. 21: ಬಿಜೆಪಿ ಮುಖಂಡರು, ನಮ್ಮ ಶಾಸಕರನ್ನು ಆಮಿಷವೊಡ್ಡುವ ಮೂಲಕ ಸೆಳೆಯಲು ಪ್ರಯತ್ನಿಸುತ್ತಿದ್ದು, ಅದನ್ನು ನೋಡಿಕೊಂಡು ನಾವು ಸುಮ್ಮನೆ ಕೂರಬೇಕೇ? ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಶುಕ್ರವಾರ ಬಿಟಿಎಂ ಲೇಔಟ್‌ನಲ್ಲಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ, ರಾಜ್ಯಪಾಲರಿಗೆ ದೂರು ನೀಡಿದರೆ, ನಾವು ಬಿಜೆಪಿ ವಿರುದ್ಧವೂ ದೂರು ನೀಡುತ್ತೇನೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ‘ದಂಗೆ ಏಳಬೇಕು’ ಎಂಬ ಪದ ಬಳಕೆಯ ಸರಿ-ತಪ್ಪು ಎಂಬ ವಿಮರ್ಶೆಗೆ ನಾನು ಹೋಗುವುದಿಲ್ಲ. ಆದರೆ, ಮುಖ್ಯಮಂತ್ರಿ ಆ ಹೇಳಿಕೆ ಯಾವ ಕಾರಣಕ್ಕೆ ನೀಡಿದ್ದಾರೆಂಬುದು ಮುಖ್ಯ ಎಂದು ಪರಮೇಶ್ವರ್, ಸಿಎಂ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.

ಬಿಜೆಪಿಯವರು ಆಪರೇಷನ್ ಕಮಲ ನಿಲ್ಲಿಸಿ, ಮೈತ್ರಿ ಸರಕಾರ ಸುಗಮವಾಗಿ ಸಾಗಲು ಅವಕಾಶ ನೀಡಬೇಕು ಎಂದು ರಾಜ್ಯಪಾಲರಿಗೆ ನಾವೂ ದೂರು ನೀಡುತ್ತೇವೆ. ಮೈತ್ರಿ ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಯಾವ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗುವುದಿಲ್ಲ ಎಂದರು.

ಜಂಟಿ ಹೋರಾಟ: ಬಿಜೆಪಿಯ ಆಪರೇಷನ್ ಕಮಲದ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಜಂಟಿ ಹೋರಾಟ ನಡೆಸಲಿದ್ದೇವೆ. ಸಿಎಂ ಹೇಳಿಕೆಯನ್ನೆ ನೆಪ ಮಾಡಿಕೊಂಡು ಪ್ರತಿಭಟನೆ ನೆಪದಲ್ಲಿ ಗೊಂದಲ ಸೃಷ್ಟಿ ಸರಿಯಲ್ಲ ಎಂದು ಪರಮೇಶ್ವರ್ ಆಕ್ಷೇಪಿಸಿದರು.

ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರಿನ ಅಭಿವೃದ್ಧಿ ಕುರಿತು ಹಲವು ವರ್ಷಗಳ ಅನುಭವವಿದೆ. ಹೀಗಾಗಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರೊಂದಿಗೆ ಚರ್ಚಿಸಿದ್ದೇನೆ ಎಂದ ಅವರು, ಮೈತ್ರಿ ಬಿಬಿಎಂಪಿಯಲ್ಲಿ ಮುಂದುವರಿಯಲಿದ್ದು, ಕಾಂಗ್ರೆಸಿನವರೇ ಮೈಯರ್ ಆಗಲಿದ್ದಾರೆ ಎಂದು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News