ರೋಗಿಯೇ ಇಲ್ಲ ಅಂದ ಮೇಲೆ ಆಪರೇಷನ್ ಮಾತೇಕೆ?: ಸಚಿವ ಪ್ರಿಯಾಂಕ್ ಖರ್ಗೆ

Update: 2018-09-21 13:45 GMT

ಕಲಬುರ್ಗಿ, ಸೆ. 21: ‘ರೋಗಿಯೇ ಇಲ್ಲ ಅಂದ ಮೇಲೆ ಆಪರೇಷನ್ ಮಾತು ಎಲ್ಲಿಯದು’ ಎಂದು ಪ್ರಶ್ನಿಸಿರುವ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಅವರಾಗಿಯೇಈ ಬಂದರೆ ನಾವು ಆಪರೇಷನ್ ಮಾಡುವುದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾರೂ ಪೇಷಂಟ್ ಇಲ್ಲ. ಪೇಷಂಟೇ ಇಲ್ಲ ಎಂದ ಮೇಲೆ ಅಪರೇಷನ್ ಮಾತು ಎಲ್ಲಿಂದ ಬರುತ್ತದೆ. ಮುಂಬೈಯಲ್ಲಿ ಅಷ್ಟು ಮಂದಿ ಶಾಸಕರಿದ್ದಾರೆ, ಇಷ್ಟು ಶಾಸಕರಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಅವರೆಲ್ಲ ಎಲ್ಲಿದ್ದಾರೆ, ಆ ಶಾಸಕರು ಯಾರೂ ಎನ್ನೋದನ್ನ ತೋರಿಸಲಿ. ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂದು ಬಿಜೆಪಿ ಮುಖಂಡರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅಧಿಕಾರ ಹಿಡಿಯಬೇಕೆಂಬ ಪ್ರಯತ್ನದಲ್ಲಿ ವಿಫಲವಾಗಿ ಹತಾಶೆಯಿಂದ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಸರಕಾರ ರಚಿಸುವುದಕ್ಕೆ ಬಿಜೆಪಿ ಹೈಕಮಾಂಡ್‌ಗೆ ಇಷ್ಟವಿಲ್ಲ. ಆದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೆಲವರು ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಆಮಿಷವೊಡ್ಡುವ ಕೆಲಸ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರ ‘ಬಿಜೆಪಿ ವಿರುದ್ಧ ಜನ ದಂಗೆ ಏಳಬೇಕು’ ಎಂಬ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಬಿಜೆಪಿಯವರು ಮಾಡುತ್ತಿರುವ ಕೀಳು ಮಟ್ಟದ ರಾಜಕೀಯಕ್ಕೆ ತಿರುಗೇಟು ನೀಡುವ ಭರದಲ್ಲಿ ದಂಗೆಯ ಮಾತು ಬಂದಿದೆ. ಆದರೆ, ಜನರನ್ನು ಎತ್ತಿಕಟ್ಟುವ ಉದ್ದೇಶದಿಂದ ಸಿಎಂ ಆ ಹೇಳಿಕೆ ನೀಡಿಲ್ಲ ಎಂದು ಸಮರ್ಥನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News