ಮೈತ್ರಿ ಸರಕಾರ ವಜಾಕ್ಕೆ ರಾಷ್ಟ್ರಪತಿಗೆ ಶಿಫಾರಸು ಮಾಡಲು ರಾಜ್ಯಪಾಲರಿಗೆ ಬಿಜೆಪಿ ಮನವಿ

Update: 2018-09-21 13:54 GMT

ಬೆಂಗಳೂರು, ಸೆ. 21: ‘ರಾಗ-ದ್ವೇಷವಿಲ್ಲದೆ ಆಡಳಿತ ಮಾಡುತ್ತೇನೆ’ ಎಂದು ಪ್ರಮಾಣ ವಚನ ಸ್ವೀಕರಿಸಿ, ಅಧಿಕಾರ ಉಳಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಕಾನೂನು ವಿರೋಧಿ ಹೇಳಿಕೆ ನೀಡಿದ್ದು, ಮೈತ್ರಿ ಸರಕಾರ ವಜಾಕ್ಕೆ ರಾಷ್ಟಪತಿಗೆ ಶಿಫಾರಸ್ಸು ಮಾಡಬೇಕೆಂದು ಕೋರಿ, ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.

ಶುಕ್ರವಾರ ಸಂಜೆ ರಾಜಭವನಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಸದಾನಂದಗೌಡ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದ ನಿಯೋಗ, ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿತು.

‘ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ಕೊಡುತ್ತೇನೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಅದರ ಬೆನ್ನಲ್ಲೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನೆಪದಲ್ಲಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ದಾಳಿ ಮಾಡಲು ಪ್ರಯತ್ನಿಸಿ ಗೂಂಡಾ ವರ್ತನೆ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಸಂವಿಧಾನದಡಿಯಲ್ಲಿ ತೆಗೆದುಕೊಂಡ ಪ್ರಮಾಣ ವಚನಕ್ಕೆ ವಿರುದ್ಧವಾಗಿ ‘ದಂಗೆ ಏಳಿ’ ಎಂದು ರಾಜ್ಯ ಜನತೆ ಪ್ರಚೋದನೆಗೆ ಕರೆ ನೀಡುವ ಮೂಲಕ ಕುಮಾರಸ್ವಾಮಿ ಗಂಭೀರ ಅಪರಾಧವೆಸಗಿದ್ದಾರೆ. ಉದ್ದೇಶಪೂರ್ವಕವಾಗಿಯೇ ಹೇಳಿಕೆ ನೀಡಿದ್ದು, ಐಪಿಸಿ ಸೆಕ್ಷನ್ 121, 121‘ಎ’, 122, 123, ಮತ್ತು 124 ‘ಎ’ ಅಡಿಯಲ್ಲಿ ಶಿಕ್ಷಾರ್ಹ. ಆದುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮೈತ್ರಿ ಸರಕಾರ ವಜಾಕ್ಕೆ ರಾಷ್ಟ್ರಪತಿಗೆ ಕೂಡಲೇ ಶಿಫಾರಸ್ಸು ಮಾಡಬೇಕು ಎಂದು ಬಿಜೆಪಿ ನಿಯೋಗ, ರಾಜ್ಯಪಾಲರಿಗೆ ತನ್ನ ಮನವಿಯಲ್ಲಿ ಕೋರಿದೆ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಹೇಳಿಕೆ ಪತ್ರಿಕಾ ವರದಿಗಳು ಹಾಗೂ ಮಾಧ್ಯಮಗಳಲ್ಲಿ ಬಿತ್ತರಗೊಂಡ ವಿಡಿಯೋ ದೃಶ್ಯಾವಳಿಗಳ ತುಣುಕುಗಳ ಸಿಡಿಯನ್ನು ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ, ಬಿಜೆಪಿ ನಿಯೋಗ ಮನವಿಯಲ್ಲಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಆ ಬಳಿಕ ಮಾತನಾಡಿದ ಕೇಂದ್ರ ಸಚಿವ ಸದಾನಂದಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಇತ್ತೀಚಿನ ನಡವಳಿಕೆಗಳಿಂದ ಅಸಮಾಧಾನದ ಕಿಡಿ ಹೊತ್ತಿಸಿದೆ. ಒಬ್ಬ ಮುಖ್ಯಮಂತ್ರಿ ಪ್ರತಿಭಟನೆ, ಧರಣಿ ಸತ್ಯಾಗ್ರಹಗಳನ್ನು ಹತೋಟಿಗೆ ತರಬೇಕು. ಆದರೆ, ಅವರೇ ‘ದಂಗೆ ಏಳಬೇಕು’ ಎಂದು ಕರೆ ನೀಡುವುದು ದೇಶದ ಇತಿಹಾಸದಲ್ಲೆ ಇದೇ ಮೊದಲು ಎಂದು ಟೀಕಿಸಿದರು.

‘ರಾಗ, ದ್ವೇಷ ಇಲ್ಲದೆ ಆಡಳಿತ ಮಾಡುತ್ತೇನೆ’ ಎಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಅಧಿಕಾರ ಉಳಸಿಕೊಳ್ಳಲು ಸಂವಿಧಾನದ ನಿಯಮಗಳನ್ನ ಉಲ್ಲಂಘನೆ ಮಾಡಿದ್ದು, ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಯೋಗ್ಯತೆ ಕುಮಾರಸ್ವಾಮಿಯವರಿಗೆ ಇಲ್ಲ. ಹೀಗಾಗಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.

ನಿಯೋಗದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಆರ್. ಅಶೋಕ್, ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ಶಾಸಕರಾದ ಗೋವಿಂದ ಕಾರಜೋಳ, ಎಸ್.ಆರ್.ವಿಶ್ವನಾಥ್, ಹಾಲಪ್ಪ, ರೇಣುಕಾಚಾರ್ಯ, ಎನ್.ರವಿಕುಮಾರ್ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.

‘ರಾಜ್ಯದ ಜನ ದಂಗೆ ಏಳುವ ಕುರಿತು ಸಿಎಂ ಹೇಳಿಕೆ ಖಂಡನೀಯ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಹೋರಾಟ ನಡೆಸಿದ್ದು, ಜನತೆ ವ್ಯಾಪಕ ಬೆಂಬಲ ನೀಡಿದ್ದಾರೆ. ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’

-ಶೋಭಾ ಕರಂದ್ಲಾಜೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News