ಕಾಂಕ್ರೀಟ್ ಕ್ಷೇತ್ರದಲ್ಲಿ ಗಣನೀಯ ಪ್ರಗತಿ: ಡಾ.ಎಂ.ಯು.ಅಶ್ವತ್ಥ್

Update: 2018-09-21 14:25 GMT

ಬೆಂಗಳೂರು, ಸೆ. 21: ದೇಶದ ಎಂಜಿನಿಯರಿಂಗ್ ಮತ್ತು ಕಾಂಕ್ರೀಟ್ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಗಳು ಮತ್ತು ಅಭಿವೃದ್ಧಿಗಳಾಗುತ್ತಿವೆ ಎಂದು ಇನ್ನೋವೇಟಿವ್ ವರ್ಲ್ಡ್ ಆಫ್ ಕಾಂಕ್ರೀಟ್‌ನ ಅಧ್ಯಕ್ಷ ಮತ್ತು ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್‌ನ ದಕ್ಷಿಣ ವಿಭಾಗದ ಉಪಾಧ್ಯಕ್ಷ ಡಾ.ಎಂ.ಯು.ಅಶ್ವತ್ಥ್ಥ್ ತಿಳಿಸಿದ್ದಾರೆ.

ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆದ ಕಾಂಕ್ರೀಟ್ ಉದ್ಯಮದ ಅಂತರ್‌ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, 25 ವರ್ಷಗಳ ನಂತರ ನಗರದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಅವಧಿಯಲ್ಲಿ ಸಾಕಷ್ಟು ತಾಂತ್ರಿಕ ಅಭಿವೃದ್ಧಿಗಳು ಮತ್ತು ಪ್ರಗತಿಯನ್ನು ನಾವು ಕಂಡಿದ್ದೇವೆ. ಇದಲ್ಲದೇ ಸಿವಿಲ್ ಎಂಜಿನಿಯರಿಂಗ್ ಮತ್ತು ಕಾಂಕ್ರೀಟ್ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ತಿಳಿಸಿದರು.

ಬೆಳಗಾವಿಯ ವಿಟಿಯು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕರಿಸಿದ್ದಪ್ಪ ಅವರು ಮಾತನಾಡಿ, ಆಧುನಿಕತೆಗೆ ತಕ್ಕಂತೆ ಅತ್ಯುತ್ತಮ ಗುಣಮಟ್ಟದ ಕಾಂಕ್ರೀಟ್ ತಯಾರಿಸುವ ಅಗತ್ಯವಿದೆ. ಕಾಂಕ್ರೀಟ್‌ಗೆ ಬಳಸುವ ರಾಸಾಯನಿಕಗಳು ಮತ್ತು ಮಿಕ್‌ಸ್ಚರ್‌ಗಳಿಂದ ನಿರ್ಮಾಣವಾಗುವ ಕಟ್ಟಡಗಳು ಆರ್ಥಿಕವಾಗಿ ಬಲಯುತವಾಗುತ್ತವೆ ಮತ್ತು ಬಾಳಿಕೆ ಬರಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು. ಕಾಂಕ್ರೀಟ್ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಶೋಧನಾ ಲೇಖನಗಳು ಮತ್ತು ಪುಸ್ತಕಗಳನ್ನು ಬರೆದರೆ ಅವುಗಳನ್ನು ಬೆಳಗಾವಿ ವಿಟಿಯು ಪ್ರಸಾರಾಂಗದ ಮೂಲಕ ಮುದ್ರಣ ಮಾಡಲು ಸಿದ್ಧರಿದ್ದೇವೆ ಎಂದು ಈ ವೇಳೆ ಅವರು ಭರವಸೆ ನೀಡಿದರು.

ಸಮ್ಮೇಳನದಲ್ಲಿ 3 ತಾಂತ್ರಿಕ ಕಾರ್ಯಾಗಾರಗಳ 15 ಪರಿಣತರು ಹೊಸ ಆವಿಷ್ಕಾರದ ಬಗೆಗಿನ ಯೋಜನಾ ವರದಿಗಳನ್ನು ಮಂಡಿಸಿದರು. ಇದಲ್ಲದೇ, ಬೆಂಗಳೂರಿನ 40 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 325 ವಿದ್ಯಾರ್ಥಿಗಳು ತಾವು ಆವಿಷ್ಕರಿಸಿದ ಕಾಂಕ್ರೀಟ್ ಸಂಶೋಧನೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಎಲ್ಲರ ಗಮನ ಸೆಳೆದರು. 40 ಕ್ಕೂ ಹೆಚ್ಚು ಕಾಂಕ್ರೀಟ್ ಕ್ಷೇತ್ರದ ಉದ್ದಿಮೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News