ಸಂಘದ ಕಾರ್ಯಾಚರಣೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಅಗತ್ಯವಿದೆ: ರಾಮಲಿಂಗಾರೆಡ್ಡಿ

Update: 2018-09-21 14:29 GMT

ಬೆಂಗಳೂರು, ಸೆ.21: ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ನೀಡುತ್ತಿರುವ ಕರ್ನಾಟಕ ರೆಡ್ಡಿ ಜನ ಸಂಘದ ಕಾರ್ಯಾಚರಣೆಯನ್ನು ಇನ್ನಿತರ ಜಿಲ್ಲೆಗಳಿಗೂ ವಿಸ್ತರಿಸುವ ಅಗತ್ಯವಿದೆ ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಶುಕ್ರವಾರ ಕೋರಮಂಗಲದ ವೇಮನ ತಾಂತ್ರಿಕ ವಿದ್ಯಾಲಯದ ಪ್ರಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರೆಡ್ಡಿಜನ ಸಂಘದ ನೂತನ ಕಟ್ಟಡಗಳ ಸಮುಚ್ಚಯದ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೆಡ್ಡಿ ಜನಸಂಘ ಕಳೆದ 83 ವರ್ಷಗಳಿಂದ ಹಂತ ಹಂತವಾಗಿ ಅಭಿವೃದ್ದಿಯನ್ನು ಕಾಣುತ್ತಾ ಬಂದಿದೆ. ಇಂದು ಸಂಘದ ಶೈಕ್ಷಣಿಕ ಸಂಸ್ಥೆಗಳಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಇದು ಇತರೆ ಜಿಲ್ಲೆಗಳಿಗೂ ವಿಸ್ತರಣೆಗೊಂಡು, ಅಲ್ಲಿಯೂ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ನಡೆಸಲಿ ಎಂದು ಅವರು ಆಶಿಸಿದರು.

ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಮಾತನಾಡಿ, ರೆಡ್ಡಿ ಜನ ಸಂಘ ನಮ್ಮ ಸಮುದಾಯದ ಏಳ್ಗೆಗೆ ಹಲವು ಕೊಡುಗೆಗಳನ್ನು ನೀಡುತ್ತಿದೆ. ಸಂಘದ ವತಿಯಿಂದ ಸ್ಥಾಪಿಸಲಾಗುತ್ತಿರುವ ವೈದ್ಯಕೀಯ ಕಾಲೇಜಿನ ಕಾರ್ಯಗಳು ಶೇ.90ರಷ್ಟು ಪೂರ್ಣವಾಗಿದೆ. ಇನ್ನುಳಿದ ಕೆಲಸಗಳನ್ನು ಪೂರ್ತಿಗೊಳಿಸಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುವುದು ಎಂದರು. ಇದೇ ವೇಳೆ ಮರಸೂರಿನಲ್ಲಿ ನಿರ್ಮಾಣವಾಗಿರುವ ವೇಮನ ಆಸ್ಪತ್ರೆ ಕಟ್ಟಡ, ಜೆ.ಸಿ.ರಸ್ತೆಯಲ್ಲಿ ನಿರ್ಮಿಸಲುದ್ದೇಶಿಸಿರುವ ನೂತನ ಕಟ್ಟಡ, ಮರಸೂರಿನಲ್ಲಿ ಇಂಟರ್‌ನ್ಯಾಷನಲ್ ಮಾಂಟೆಸರಿ ಶಾಲೆ, ಕೋರಮಂಗಲದಲ್ಲಿ ಐಟಿ ಎಂಜಿನಿಯರಿಂಗ್ ಕಾಲೇಜು, ರೂಪೇನ ಅಗ್ರಹಾರದಲ್ಲಿ ವೇಮನ ವಿದ್ಯಾರ್ಥಿಗಳ ವಸತಿಗೃಹದ ಕಟ್ಟಡ, ಕೋರಮಂಗಲದಲ್ಲಿ ಐಟಿ ವಿದ್ಯಾರ್ಥಿನಿಯರ ವಸತಿಗೃಹದ ಕಟ್ಟಡಗಳ ಉದ್ಘಾಟನೆ ಮತ್ತು ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ, ಬೆಳಗಾವಿಯ ವಿಟಿಯು ಉಪಕುಲಪತಿ ಡಾ.ಎಚ್.ಎನ್.ಜಗನ್ನಾಥ ರೆಡ್ಡಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರೆಡ್ಡಿಜನ ಸಂಘದ ಅಧ್ಯಕ್ಷ ಎಚ್.ಎನ್.ಜಯರಾಘವ ರೆಡ್ಡಿ ವಹಿಸಿದ್ದರು.

ಮೇಯರ್ ಹುದ್ದೆಯ ಆಕಾಂಕ್ಷಿಗಳು ಬಹಳಷ್ಟು ಜನರು ಇದ್ದಾರೆ. ಅಲ್ಲದೆ, ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೂ ಕೆಲವಷ್ಟು ಜನರು ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರೊಂದಿಗೆ ಸಮಾಲೋಚನೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.

ರಾಮಲಿಂಗಾ ರೆಡ್ಡಿ, ಶಾಸಕ, ಕಾಂಗ್ರೆಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News