ಬಿಎಸ್‌ವೈಗೆ ತಾಕತ್ತಿದ್ದರೆ ದಾಖಲೆಗಳನ್ನು ಬಿಡಗಡೆ ಮಾಡಲಿ: ಪರಿಷತ್ ಸದಸ್ಯ ಟಿ.ಎ.ಶರವಣ

Update: 2018-09-21 14:51 GMT

ಬೆಂಗಳೂರು, ಸೆ.21: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪದೇ ಪದೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಆರೋಪದ ಸಂಬಂಧದ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಪರಿಷತ್ ಸದಸ್ಯ ಟಿ.ಎ.ಶರವಣ ಸವಾಲು ಹಾಕಿದರು.

ಶುಕ್ರವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಗುರುವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆಂದು ಮಾಧ್ಯಮಗಳಿಗೆ ಹೇಳಿ ಸುಮ್ಮನಾದರು. ಆ ಮೂಲಕ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಧಕ್ಕೆ ತರಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆಗೂಡಿ ಸಂವಿಧಾನ ಬದ್ಧವಾಗಿ ಸರಕಾರ ರಚಿಸಿದೆ. ಆದರೆ, ಬಿಜೆಪಿ ನಾಯಕರು ಸರಕಾರವನ್ನು ಉರುಳಿಸಲು ಸಂವಿಧಾನ ಬಾಹಿರವಾಗಿ ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ. ಇದೆಲ್ಲವುಗಳನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಮಾಧ್ಯಮಗಳ ಮೂಲಕ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ಬಹು ದೂರವಾದದ್ದಾಗಿದೆ. ಕಾಂಗ್ರೆಸ್-ಜೆಡಿಎಸ್‌ನ ಯಾವೊಬ್ಬ ಶಾಸಕನೂ ಬಿಜೆಪಿಗೆ ಹೋಗುವುದಿಲ್ಲ. ಹೀಗಾಗಿ ರಾಜ್ಯದ ಜನತೆ ಬಿಜೆಪಿ ಹಬ್ಬಿಸುವ ಸುಳ್ಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬಾರದು ಎಂದು ಅವರು ಹೇಳಿದರು.

ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಕೇಂದ್ರ ಸರಕಾರ ಇಲ್ಲಸಲ್ಲದ ಆರೋಪ ಹೊರಿಸಿ ಬೆದರಿಸಲು ಹೊರಟಿದೆ. ಇಂತಹ ಬೆದರಿಕೆಗಳಿಗೆಲ್ಲ ಅವರು ಜಗ್ಗುವವರಲ್ಲ. ಬಿಜೆಪಿ ನಾಯಕರು ಸರಕಾರ ಉರುಳಿಸಲು ಷಡ್ಯಂತ್ರಗಳನ್ನು ಮುಂದುವರೆಸಿದರೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News