ಸಿಎಂ ಕುಮಾರಸ್ವಾಮಿ ಭಯೋತ್ಪಾದಕರಂತೆ ಮಾತನಾಡುತ್ತಾರೆ: ಶಾಸಕ ರೇಣುಕಾಚಾರ್ಯ

Update: 2018-09-21 15:09 GMT

ಬೆಂಗಳೂರು, ಸೆ.21: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ವಿರುದ್ಧ ದಂಗೆ ಹೇಳಬೇಕು ಎಂದಿರುವ ಹೇಳಿಕೆ ಖಂಡಿಸಿ ಬಿಜೆಪಿ ನಾಯಕರು ಇಂದಿಲ್ಲಿ ಪ್ರತಿಭಟನೆ ನಡೆಸಿ, ಕುಮಾರಸ್ವಾಮಿ ಮೇಲೆ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಶುಕ್ರವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಗೂ ಕುಮಾರಸ್ವಾಮಿ ಅವರ ದಂಗೆ ಹೇಳಿಕೆ ಖಂಡಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿಗಳೇ ಕಾನೂನು ಸುವ್ಯವಸ್ಥೆ ಹಾಳಾಗುವಂತೆ ಕರೆ ನೀಡಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಹೇಳಿದರು.

ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಕುಮಾರಸ್ವಾಮಿ ಬಾಯಿಗೆ ಬಂದಂತೆ, ನಾಲಿಗೆ ಮೇಲೆ ಹಿಡಿತ ಇಲ್ಲದವರಂತೆ ಮಾತನಾಡುತ್ತಿದ್ದಾರೆ. ನಿಮ್ಮ ಹೇಳಿಕೆಯಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಯಡಿಯೂರಪ್ಪಅವರ ನಿವಾಸಕ್ಕೆ ನುಗ್ಗಿದ್ದಾರೆ ಎಂದ ಅವರು, ಸಮ್ಮಿಶ್ರ ಸರಕಾರದಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಹೇಳುತ್ತಾರೆ. ನಿಮ್ಮ ಸರಕಾರದಲ್ಲಿರುವ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ ಎಂದರು.

ಶಾಸಕ ಆರ್.ಅಶೋಕ್ ಮಾತನಾಡಿ, ದಂಗೆ ಏಳಿ ಎಂದು ಕರೆ ಕೊಡುವುದು ನಕ್ಸಲಿಯರು ಮತ್ತು ಸಮಾಜಘಾತುಕರು. ಮುಖ್ಯಮಂತ್ರಿಗಳು ಇಂಥ ಹೇಳಿಕೆ ಕೊಟ್ಟಿರುವುದು ಇದೇ ಮೊದಲು. ನಿಮಗೆ ತಾಕ್ಕತಿದ್ದರೆ ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಿ ಎಂದು ಸವಾಲೆಸೆದರು.

ಸ್ವತಃ ಮುಖ್ಯಮಂತ್ರಿಗಳೇ 15-18ರಿಂದ ಶಾಸಕರು ಮುಂಬೈ-ಪೂನಾಕ್ಕೆ ಹೊರಟಿದ್ದಾರೆ ಎಂದು ಹೇಳುತ್ತಿದ್ದಾರೆ. ನಿಮ್ಮ ನಾಯಕತ್ವದ ಮೇಲೆ ನಂಬಿಕೆ ಇಲ್ಲದ ಶಾಸಕರು ಬಂಡಾಯವೆದ್ದಿದ್ದಾರೆ. ನಿಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಗೂಬೆ ಕೂರಿಸುವ ಯತ್ನ ಸರಿಯಲ್ಲ ಎಂದರು.

ಪ್ರತಿಭಟನೆಯಲ್ಲಿ ಸಂಸದ ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯ ರವಿಕುಮಾರ್, ನಗರ ಘಟಕ ಅಧ್ಯಕ್ಷ ಸದಾಶಿವ, ಮಾಜಿ ಶಾಸಕ ಮುನಿರಾಜು, ಯುವ ಮೋರ್ಚಾ ಅಧ್ಯಕ್ಷ ಸಪ್ತಗಿರಿ ಗೌಡ, ಮಾಜಿ ಸಚಿವ ಸೋಮಶೇಖರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಭಯೋತ್ಪಾದಕ ಸಿಎಂ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಯೋತ್ಪಾದಕರಂತೆ ಮಾತನಾಡುತ್ತಾರೆ. ಯಾವುದೇ ಒಂದು ರಾಷ್ಟ್ರದ ಮೇಲೆ ದಾಳಿ ಮಾಡುವಂತೆ ಆ ಸಂಘಟನೆಯ ಮುಖ್ಯಸ್ಥ ಕರೆ ಕೊಡುತ್ತಾನೆ. ಅದೇ ರೀತಿ ಕುಮಾರಸ್ವಾಮಿ ದಂಗೆ ಏಳುವಂತೆ ಕರೆ ಕೊಟ್ಟಿರುವುದು ನಾಚಿಕೆಗೇಡಿನ ಸಂಗತಿ.

-ರೇಣುಕಾಚಾರ್ಯ, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News