ಬಿಜೆಪಿಯಿಂದ ರಾಜ್ಯದ ಜನದ ದಿಕ್ಕು ತಪ್ಪಿಸುವ ಕೆಲಸ: ಪರಿಷತ್ ಸದಸ್ಯ ಟಿ.ಎ.ಶರವಣ

Update: 2018-09-21 16:05 GMT

ಬೆಂಗಳೂರು, ಸೆ.21: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಂಗೆ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ಬಳಿಕವು ರಾಜ್ಯ ಬಿಜೆಪಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಇವತ್ತು ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ರಸ್ತೆ ತಡೆ, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುವ ಮೂಲಕ ಸಾರ್ವಜನಿಕರ ತೊಂದರೆ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಎಚ್. ಕೋನರಡ್ಡಿ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ.

ರಾಜ್ಯ ಬಿಜೆಪಿ ನಾಯಕರು ಈಗಾಗಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅದರ ಮೇಲೆ ದಂಗೆ ಎದ್ದಿರುವುದು ಬಿಜೆಪಿಯೇ ಹೊರತು ಜೆಡಿಎಸ್ ಹಾಗೂ ಕಾಂಗ್ರೆಸ್ ಅಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಅವರ ದಂಗೆ ಅಂದಿದನ್ನೇ ಮುಂದಿಟ್ಟುಕೊಂಡು ಇವತ್ತು ರಾಜ್ಯದಲ್ಲಿ ಬಿಜೆಪಿಯವರು ಸರಕಾರದ ವಿರುದ್ದ ದಂಗೆ ಎದ್ದಿರುವುದು ನೋಡಿದರೆ ಅವರ ಹತಾಸೆ ಮನೋಭಾವನೆ ಹಾಗೂ ಅಧಿಕಾರ ದಾಹವನ್ನು ತೋರಿಸುತ್ತದೆ ಎಂದು ಹೇಳಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಇದು ಕಳ್ಳರ ಸರಕಾರ ಅಂದರೆ, ಬಿಜೆಪಿಯ ಹಾಲಿ ಶಾಸಕ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ವಯಸ್ಸಿನ ಇತಿಮಿತಿ ಮರೆತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮೊಹೀನಿ ಭಸ್ಮಾಸುರ ಅಂತಾರೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಿಎಂ ಕುಮಾರಸ್ವಾಮಿ ಅವರು ನಗರ ನಕ್ಸಲೇಟ್ ರೀತಿ ನಡೆದುಕೊಳ್ಳುತ್ತಿದ್ದಾರೆ ಅಂತಾರೆ. ಇದು ಬಿಜೆಪಿ ನಾಯಕರ ಸಂಸ್ಕೃತಿ ಪರಂಪರೆಯನ್ನು ತೋರಿಸುತ್ತದೆ. ಅವರ ಬಾಯಿ ಚಪಲದ ಎಲ್ಲ ಹೇಳಿಕೆಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರಿಗೆ ಮುಂಬರುವ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಎಚ್. ಕೋನರಡ್ಡಿ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News