ದೃಷ್ಟಿಹೀನರಿಗೆ ಉಚಿತ ಬಸ್ ಪಾಸ್: ಹೈಕೋರ್ಟ್‌ಗೆ ತಿಳಿಸಿದ ಸಾರಿಗೆ ಇಲಾಖೆ

Update: 2018-09-21 16:14 GMT

ಬೆಂಗಳೂರು, ಸೆ.21: ವಾಯುವಜ್ರ, ವೋಲ್ವೊ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಎಲ್ಲ ಬಸ್‌ಗಳಲ್ಲಿ ಸಂಪೂರ್ಣ ದೃಷ್ಟಿಹೀನರ ಸಂಚಾರಕ್ಕೆ ಉಚಿತ ಬಸ್ ಪಾಸ್ ಮಾನ್ಯ ಮಾಡಲಾಗುವುದು ಎಂದು ಕೆಎಸ್ಸಾರ್ಟಿಸಿ ಹೈಕೋರ್ಟ್‌ಗೆ ತಿಳಿಸಿದೆ.

ಈ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಅನ್ನು ವಿಲೇವಾರಿ ಮಾಡಿದೆ.

ವಿಚಾರಣೆ ವೇಳೆ ಕೆಎಸ್ಸಾರ್ಟಿಸಿ ಪರ ವಕೀಲರು, ವಾಯುವಜ್ರ, ವೋಲ್ವೊ ಸೇರಿದಂತೆ ಎಲ್ಲ ಬಗೆಯ ಬಸ್‌ಗಳಲ್ಲಿ ಅಂಧರಿಗೆ ಉಚಿತವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಕುರಿತಂತೆ ಆದೇಶಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿದ್ದುಪಡಿ ಆದೇಶವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಕೋರಿಕೆ ಏನು: ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಪ್ರಧಾನ ಕಾರ್ಯದರ್ಶಿ ಗೌತಮ್ ಪ್ರಕಾಶ್ ಅಗರವಾಲ್ ಈ ಪಿಐಎಲ್ ಸಲ್ಲಿಸಿದ್ದರು. ವಾಯುವಜ್ರ ಹಾಗೂ ವೋಲ್ವೊ ಬಸ್‌ಗಳಲ್ಲಿ ಉಚಿತ ಪಾಸ್ ಮಾನ್ಯ ಮಾಡುವ ಆದೇಶವನ್ನು ಹಿಂಪಡೆದಿರುವುದರಿಂದ ಸಂಪೂರ್ಣ ಅಂಧರ ಹಕ್ಕಿಗೆ ಧಕ್ಕೆಯಾಗಿದೆ. ಹೀಗಾಗಿ, ಈ ನಿರ್ಧಾರ ಹಿಂಪಡೆಯಲು ನಿರ್ದೇಶಿಸಬೇಕು ಎಂದು ಕೋರಿದ್ದರು.

ಅರ್ಜಿದಾರರ ಪರ ವಾದಿಸಿದ ವಕೀಲರು, ಭಾಗಶಃ ಅಂಧತ್ವ ಹೊಂದಿರುವವರಿಗೂ ಉಚಿತ ಬಸ್ ಪಾಸ್ ವ್ಯವಸ್ಥೆ ದೊರಕಿಸಿಕೊಡಲು ನಿರ್ದೇಶನ ನೀಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಕುರಿತಂತೆ ನೀವು ಕೆಎಸ್ಸಾರ್ಟಿಸಿಗೆ ಮನವಿ ಸಲ್ಲಿಸಿ. ನಾಲ್ಕು ವಾರಗಳಲ್ಲಿ ಇಲಾಖೆ ನಿಮ್ಮ ಮನವಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News