ರೌಡಿಗಳ ಮೇಲೆ ತೀವ್ರ ನಿಗಾ: ಅಲೋಕ್ ಕುಮಾರ್
Update: 2018-09-21 22:00 IST
ಬೆಂಗಳೂರು, ಸೆ.21: ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್, ವೃತ್ತಿಪರ ಆರೋಪಿಗಳ ಬಗ್ಗೆ ನಿಗಾ ಇಡಲಾಗುವುದು ಎಂದು ಅಪರಾಧ ವಿಭಾಗದ ನೂತನ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಬಿ ವ್ಯಾಪ್ತಿಯಲ್ಲಿ ಆರು ತಿಂಗಳಿನಿಂದ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳನ್ನು ಕೈಗೆತ್ತಿಕೊಂಡು ಈ ಪ್ರಕರಣಗಳ ತನಿಖೆ ವಿಳಂಬಕ್ಕೆ ಕಾರಣವೇನೆಂಬುದರ ಬಗ್ಗೆ ಅಧಿಕಾರಿಗಳಿಂದ ಸಮಜಾಯಿಷಿ ಕೇಳುತ್ತೇನೆ ಎಂದು ಹೇಳಿದರು.
ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಸರಕಾರ ಅಸ್ಥಿರಗೊಳಿಸುವ ಪಾತ್ರದಲ್ಲಿ ರೌಡಿಗಳ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೌಡಿಗಳು ಹಾಗೂ ವೃತ್ತಿಪರ ಆರೋಪಿಗಳ ಮೇಲೆ ನಿಗಾ ಇಡಲಾಗಿದೆ ಎಂದರು.