ಅಂತರ್‌ರಾಷ್ಟ್ರೀಯ ಆಹಾರ ಮೇಳಕ್ಕೆ ಚಾಲನೆ: ಬಾಯಿ ಚಪ್ಪರಿಸಲು 150 ಆಹಾರ ಮಳಿಗೆಗಳು

Update: 2018-09-21 16:34 GMT

ಬೆಂಗಳೂರು, ಸೆ.21: ಆಂಧ್ರದ ಎರಕಾರಮ್ ದೋಸೆ, ಬಾಳೆಕಾಯಿ ಬಿರಿಯಾನಿ, ಮಹಾರಾಷ್ಟ್ರದ ಮಿಸಲ್ ಪಾವ್, ತಮಿಳುನಾಡಿನ ಬ್ರಿಂಜಾಲ್ ಬಿರಿಯಾನಿ, ಬಿಹಾರದ ಲಿಟ್ಟಿ ಚೋಕಾ, ಗುಜರಾತ್‌ನ ನಫೆಡ್ಕಾ ಸೇರಿದಂತೆ ರಾಜ್ಯದ ವಿವಿಧ ಬಗೆಯ ತಿನಿಸುಗಳು ಒಂದೇ ಜಾಗದಲ್ಲಿ ಸವಿಯುವಂತಹ ಅಂತರ್‌ರಾಷ್ಟ್ರೀಯ ಸಸ್ಯಾಹಾರ ಮೇಳವನ್ನು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಲಾಗಿದೆ.

ಶುಕ್ರವಾರ ನಗರದ ರೆಡ್ ರಿಬ್ಬನ್‌ಪ್ರೊ ಸಂಸ್ಥೆ ಆಯೋಜಿಸಿರುವ ಅಂತರ್‌ರಾಷ್ಟ್ರೀಯ ಆಹಾರ ಮೇಳಕ್ಕೆ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಚಾಲನೆ ನೀಡಿದ್ದು, ಇಂದಿನಿಂದ ಸೆ.23ರವರೆಗೆ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ 150ಕ್ಕೂ ಹೆಚ್ಚು ಆಹಾರ ಮಳಿಗೆಗಳು ತೆರೆಯಲಿವೆ. ದೇಶ, ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಂಗಳೂರಿನಲ್ಲಿ ಅಂತರ್‌ರಾಷ್ಟ್ರೀಯ ಸಸ್ಯಾಹಾರಿ ಆಹಾರ ಮೇಳ ಆಯೋಜಿಸಿರುವುದು ಉಪಯುಕ್ತವಾಗಿದೆ. ಹಾಗೂ ನಗರದ ಜನತೆಗೆ ವಿವಿಧ ರಾಜ್ಯಗಳ ವಿಶಿಷ್ಟವಾದ ಆಹಾರ ತಿನುಸುಗಳನ್ನು ಪರಿಚಯಿಸಲಾಗುತ್ತಿರುವುದಕ್ಕೆ ರೆಡ್ ರಿಬ್ಬನ್‌ಪ್ರೊ ಸಂಸ್ಥೆಗೆ ಸದಸ್ಯ ಶರವಣ ಅಭಿನಂದನೆ ಸಲ್ಲಿಸಿದರು.

ಕೊಡಗಿಗೆ ಪರಿಹಾರ: ಆಹಾರ ಮೇಳದಲ್ಲಿ ಬರುವ ಲಾಭದ ಶೇಕಡವಾರು ಹಣವನ್ನು ಕೊಡಗು ಹಾಗೂ ಕೇರಳದ ಸಂತ್ರಸ್ಥರಿಗೆ ಪರಿಹಾರ ನೀಡುವುದಾಗಿ ಮೇಳದ ಆಯೋಜಕರು ಉದ್ದೇಶಿಸಿದ್ದಾರೆ. ಹೀಗಾಗಿ ನಗರದ ಜನತೆ ವಿವಿಧ ಬಗೆ ತಿನಿಸುಗಳನ್ನು ಸವಿಯುವ ಮೂಲಕ ಆಹಾರ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಅವರು ಆಶಿಸಿದರು. ಈ ವೇಳೆ ಬಿಬಿಎಂಪಿ ಸದಸ್ಯೆ ಲತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News