×
Ad

ಉತ್ತಮ ಸಂವಹನ ಕೌಶಲ್ಯ ಮುಖ್ಯ: ಮನಶಾಸ್ತ್ರಜ್ಞ ಜಗನ್ನಾಥ್ ರಾವ್

Update: 2018-09-21 22:20 IST

ಬೆಂಗಳೂರು, ಸೆ. 21: ಶೈಕ್ಷಣಿಕ ವಲಯದಲ್ಲಿ ಪೈಪೋಟಿ ಹೆಚ್ಚಿದಂತೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ, ಜ್ಞಾನ, ಸಂವಹನ ಕೌಶಲ್ಯ ಹೊಂದುವುದು ಅತಿಮುಖ್ಯ ಎಂದು ಮನಶಾಸ್ತ್ರಜ್ಞ ಡಾ.ಜಗನ್ನಾಥರಾವ್ ಇಂದಿಲ್ಲಿ ಪ್ರತಿಪಾದಿಸಿದ್ದಾರೆ.

ಶುಕ್ರವಾರ ಇಲ್ಲಿನ ಯಲಹಂಕದ ಆದಿತ್ಯ ಬೆಂಗಳೂರು ಇನ್ಸ್‌ಟಿಟ್ಯೂಟ್ ಆಫ್ ಫಾರ್ಮಸಿ ಎಜುಕೇಶನ್ ಅಂಡ್ ರಿಸರ್ಚ್(ಎಬಿಐಪಿಇಆರ್)ನಲ್ಲಿ ನಡೆದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಾಗಿ ಎರಡು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಹವ್ಯಾಸಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ ಎಂದರು.

ವಿದ್ಯಾರ್ಥಿಗಳಿಗೆ ಕಲಿಕೆಯ ಹಸಿವು ನಿರಂತರವಾಗಿರಬೇಕು. ಕಲಿಕೆಯಿಂದ ಉತ್ತಮ ಜ್ಞಾನ ಬೆಳೆದು ಎಂತಹ ಪರಿಸ್ಥಿತಿಯನ್ನಾದರೂ ಎದುರಿಸುವ ಮಾನಸಿಕ ಸದೃಢತೆ ಬೆಳೆಯುತ್ತದೆ ಎಂದ ಅವರು, ವಿದ್ಯಾಥಿಗಳು ಮಾತ್ರವಲ್ಲ, ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯು ಕಲಿಕೆಯಲ್ಲಿ ಆಸಕ್ತಿ ಹೊಂದಿರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಲು ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದಿತ್ಯ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್‌ನ ಅಧ್ಯಕ್ಷ ಡಾ.ಬಿ.ಎ.ವಿಶ್ವನಾಥ್ ಮಾತನಾಡಿ, ವಿದ್ಯಾರ್ಥಿಗಳು ಸತತ ಅಧ್ಯಯನವನ್ನು ಗುರಿಯಾಗಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳು, ನಡವಳಿಕೆ, ವರ್ತನೆ, ಸಂವಹನ ಕೌಶಲ್ಯ ಮತ್ತು ದೇಹ ಭಾಷೆಯನ್ನು ಹೊಂದಬೇಕು. ಅದರಿಂದ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ ಎಂದು ಹೇಳಿದರು. ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿ ಪೈಪೋಟಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News