ಭಡ್ತಿ ಮೀಸಲು ಕಾಯ್ದೆ ಜಾರಿಯಾಗಲೇಬೇಕೆಂಬುದು ನಮ್ಮ ಬದ್ಧತೆ: ಸಚಿವ ಪ್ರಿಯಾಂಕ್ ಖರ್ಗೆ

Update: 2018-09-22 12:45 GMT

ಬೆಂಗಳೂರು, ಸೆ. 22: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ)ದ ಅಧಿಕಾರಿಗಳು ಮತ್ತು ನೌಕರರ ಭಡ್ತಿ ಮೀಸಲಾತಿ ಜಾರಿಯಾಗಲೇಬೇಕು. ಇದು ನಮ್ಮ ಬದ್ಧತೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಸದಾಶಿವನಗರದಲ್ಲಿನ ತನ್ನ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ನಡೆದ ಚರ್ಚೆಯ ಬಗ್ಗೆ ತಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಮಾಲೋಚನೆ ನಡೆಸಿದ್ದಾರೆ. ರಾಜ್ಯ ಸರಕಾರ ಭಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಗೊಳಿಸುವ ವಿಶ್ವಾಸವಿದೆ. ಈ ವಿಚಾರ ಸುಪ್ರೀಂ ಕೋರ್ಟ್ ಮುಂದಿದ್ದು, ಕಾಯ್ದೆ ಜಾರಿ ಕೊಂಚ ವಿಳಂಬ ಆಗುವ ನಿರೀಕ್ಷೆ ಇದೆ. ಆದರೆ, ಕಾಯ್ದೆ ಜಾರಿಗೆ ಸಿಎಂ ತಡೆಯೊಡ್ಡಿದ್ದಾರೆಂಬುದು ಸುಳ್ಳು ಎಂದು ಅಲ್ಲಗಳೆದರು.

ಸರಕಾರ ಸುಭದ್ರ: ಮುಂಬೈಗೆ 18 ಮಂದಿ ಶಾಸಕರು ಹೋಗುತ್ತಿದ್ದಾರೆಂಬ ಬಿಜೆಪಿ ಮುಖಂಡರ ಹೇಳಿಕೆ ಇದೀಗ ಸುಳ್ಳಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಐದು ವರ್ಷಗಳ ಕಾಲ ಸುಭದ್ರವಾಗಿರಲಿದೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ವಿರುದ್ದ ಜನತೆ ದಂಗೆ ಏಳಲಿದ್ದಾರೆ’ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿಕೆಯಲ್ಲಿ ‘ದಂಗೆ’ ಪದ ಬಳಕೆ ತಪ್ಪಾಗಿರಬಹುದು. ಆದರೆ, ಆ ಹೇಳಿಕೆ ನೀಡುವ ಸಂದರ್ಭ ಬಂದದ್ದು ಏಕೆ ಎಂಬುದು ಮುಖ್ಯ. ಬಿಜೆಪಿಗೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ಸಿಎಂ ಹೇಳಿಕೆ ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಏನೇನು ಮಾಡಬೇಕೆಂದು ಕೇಂದ್ರದಿಂದ ಸೂಚನೆ ಬರುತ್ತದೆ. ಈಗಾಗಲೇ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ಇಡಿ, ಐಟಿ ಮೂಲಕ ಕಿರುಕುಳ ನೀಡಲಾಗುತ್ತಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಮನಸ್ಥಿತಿ ಗೊತ್ತಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ, ಬಿಎಸ್‌ವೈ ಹೇಳಿಕೆಗೆ ತಿರುಗೇಟು ನೀಡಿದರು.

ಪರಿಶಿಷ್ಟ ಅಧಿಕಾರಿಗಳು ಮತ್ತು ನೌಕರರ ಭಡ್ತಿ ಮೀಸಲಾತಿ ಕಾಯ್ದೆಯನ್ನು ರಾಜ್ಯ ಸರಕಾರ ತ್ವರಿತಗತಿಯಲ್ಲಿ ಜಾರಿಗೆ ತರುವ ಕೆಲಸ ಮಾಡಬೇಕು. ಈಗಾಗಲೇ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ ಮೇಲೆ ಜಾರಿಗೆ ತರಬೇಕು. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯೂ ಆಗಿದೆ. ಆದಷ್ಟು ಬೇಗ ಕಾಯ್ದೆ ಜಾರಿಗೆ ತರುವ ಕೆಲಸ ಮಾಡಲಿ’

-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News