20ನೇ ಶತಮಾನದ 'ಭಾರತದ ಮುಸ್ಲಿಂ ಮಹಿಳೆಯರು'

Update: 2018-09-22 13:12 GMT

ಸುರಯ್ಯ ತ್ವಯ್ಯಬ್ಜಿ, ಹಮೀದ್ ಹಬೀಬುಲ್ಲ್ಲಾ, ಅಝೀಝ ಫಾತಿಮಾ ಇಮಾಮ್, ಕುದ್ಸಿಯ ಝೈದಿ, ಸಯೀದ ಕುರ್ಶಿದ್, ಮುಫಿದಾ ಅಹಮದ್, ಝುಹರ ಅಲಿ ಯಾವರ ಜಂಗ್, ರಝಿಯಾ ಸಜ್ಜದ ಝಹೀರ್, ತ್ವಯ್ಯಿಬ ಜಂಗ್, ಅತಿಯ ಫೈಝಿ, ಶರೀಫ ಹಮೀದ ಅಲಿ, ಫಾತಿಮಾ ಇಸ್ಮಾಯೀಲ್, ಮಾಸೌಮ ಹುಸೇನ ಖಾನ್, ಅನಿಸ್ ಕಿದ್ವಾಯಿ, ಹಝ್ರ ಬೇಗಂ, ಕುದ್ಸಿಯ ಏಜಾಝ್ ರಸೂಲ್, ಮುಮ್ತಾಝ್ ಜಹಾನ್ ಹೈದರ್, ಸಿದ್ದೀಕ ಕಿದ್ವಾಯಿ, ಆತಿಯಾ ಹುಸೈನ, ಸಾಲಿಹ ಆಬಿದ್ ಹುಸೈನ, ಸಫಿಯಾ ಜಾನ್ ನಿಸಾರ್ ಅಖ್ತರ್ ಈ ಮುಸ್ಲಿಂ ಮಹಿಳೆಯರು ವಿಭಿನ್ನ ವರ್ಗಗಳ ಹಿನ್ನೆಲೆಯಿಂದ ಬಂದವರು. ತಮ್ಮ ಸಮಾಜದ ಕಟ್ಟಳೆಯನ್ನು ಕಿತ್ತೊಗೆದು ಲೇಖಕಿಯರಾಗಿ, ಕಲಾವಿದೆಯರಾಗಿ, ರಾಜಕಾರಣಿಗಳಾಗಿ, ಸ್ತ್ರೀವಾದಿಗಳಾಗಿ, ಹೋರಾಟಗಾರ್ತಿಯರಾಗಿ ಬದುಕನ್ನು ಕಟ್ಟಿಕೊಂಡರು. ಮಾನವೀಯ, ಸಮಸಮಾಜವನ್ನು ಕಟ್ಟಿದರು. ಸ್ವಾತಂತ್ರಾ ನಂತರ ಆಧುನಿಕ ಭಾರತ ರೂಪುಗೊಂಡ ಆ ದಶಕಗಳ ಜೊತೆಗೆ ಇವರ ಬದುಕಿನ ನಿರೂಪಣೆ ಹೆಣೆದುಕೊಂಡಿದೆ. ಬೆಸೆದುಕೊಂಡಿದೆ.

ಮುಸ್ಲಿಂ ಮಹಿಳೆಯರ ಹಕ್ಕುಗಳ ಪರವಾಗಿ ಕೆಲಸ ಮಾಡುತ್ತಿರುವ ಮುಸ್ಲಿಂ ಮಹಿಳಾ ವೇದಿಕೆಯು ‘ಸಿದ್ಧ ಮಾದರಿಗಳನ್ನು ಮುರಿದವರು: 20ನೇ ಶತಮಾನದ ಭಾರತದ ಮುಸ್ಲಿಂ ಮಹಿಳೆಯರು’ ಎನ್ನುವ ಮಾತುಕತೆಯನ್ನು ಇತ್ತೀಚೆಗೆ ಏರ್ಪಡಿಸಿತ್ತು. ಜನಮಾನಸದ ನೆನಪಿನಿಂದ ಮರೆತು ಹೋದ ಈ ಕಥನವನ್ನು ಮತ್ತೆ ಸಾರ್ವಜನಿಕ ಚರ್ಚೆಗೆ ತಂದು ನಮ್ಮನ್ನು ವಿಸ್ಮತಿಯಿಂದ ಹೊರಗೆಳೆಯಲು ಈ ಮುಕ್ತ ಮಾತುಕತೆ ಅವಕಾಶ ಕಲ್ಪಿಸಿಕೊಟ್ಟಿತು. ಸ್ವಾತಂತ್ರಪೂರ್ವ ಮತ್ತು ಸಾತಂತ್ರೋತ್ತರ ಸಾರ್ವಜನಿಕ ಬದುಕಿನ ವಿವಿಧ ವಲಯಗಳಲ್ಲಿ 21 ಮುಸ್ಲಿಂ ಮಹಿಳೆಯರ ಸಾಧನೆಯನ್ನು ಈ ಸಂವಾದ ವಿವರವಾಗಿ ಬಿಚ್ಚಿಟ್ಟಿತು. ಸುರಯ್ಯ ತ್ವಯ್ಯಬ್ಜಿ, ಹಮೀದ್ ಹಬೀಬುಲ್ಲ್ಲಾ, ಅಝೀಝ ಫಾತಿಮಾ ಇಮಾಮ್, ಕುದ್ಸಿಯ ಝೈದಿ, ಸಯೀದ ಕುರ್ಶಿದ್, ಮುಫಿದಾ ಅಹಮದ್, ಝುಹರ ಅಲಿ ಯಾವರ ಜಂಗ್, ರಝಿಯಾ ಸಜ್ಜದ ಝಹೀರ್, ತ್ವಯ್ಯಿಬ ಜಂಗ್, ಅತಿಯ ಫೈಝಿ, ಶರೀಫ ಹಮೀದ ಅಲಿ, ಫಾತಿಮಾ ಇಸ್ಮಾಯೀಲ್, ಮಾಸೌಮ ಹುಸೇನ ಖಾನ್, ಅನಿಸ್ ಕಿದ್ವಾಯಿ, ಹಝ್ರ ಬೇಗಂ, ಕುದ್ಸಿಯ ಏಜಾಝ್ ರಸೂಲ್, ಮುಮ್ತಾಝ್ ಜಹಾನ್ ಹೈದರ್, ಸಿದ್ದೀಕ ಕಿದ್ವಾಯಿ, ಆತಿಯಾ ಹುಸೈನ, ಸಾಲಿಹ ಆಬಿದ್ ಹುಸೈನ, ಸಫಿಯಾ ಜಾನ್ ನಿಸಾರ್ ಅಖ್ತರ್ ಈ ಮುಸ್ಲಿಂ ಮಹಿಳೆಯರು ವಿಭಿನ್ನ ವರ್ಗಗಳ ಹಿನ್ನೆಲೆಯಿಂದ ಬಂದವರು. ತಮ್ಮ ಸಮಾಜದ ಕಟ್ಟಳೆಯನ್ನು ಕಿತ್ತೊಗೆದು ಲೇಖಕಿಯರಾಗಿ, ಕಲಾವಿದೆಯರಾಗಿ, ರಾಜಕಾರಣಿಗಳಾಗಿ, ಸ್ತ್ರೀವಾದಿಗಳಾಗಿ, ಹೋರಾಟಗಾರ್ತಿಯರಾಗಿ ಬದುಕನ್ನು ಕಟ್ಟಿಕೊಂಡರು. ಮಾನವೀಯ, ಸಮಸಮಾಜವನ್ನು ಕಟ್ಟಿದರು. ಸ್ವಾತಂತ್ರಾ ನಂತರ ಆಧುನಿಕ ಭಾರತ ರೂಪುಗೊಂಡ ಆ ದಶಕಗಳ ಜೊತೆಗೆ ಇವರ ಬದುಕಿನ ನಿರೂಪಣೆ ಹೆಣೆದುಕೊಂಡಿದೆ. ಬೆಸೆದುಕೊಂಡಿದೆ.

► ಸುರಯ್ಯ ತ್ವಯ್ಯಬ್ಜಿ

ಭಾರತದ ರಾಷ್ಟ್ರೀಯ ಧ್ವಜವನ್ನು ವಿನ್ಯಾಸಗೊಳಿಸಿದ ಸುರಯ್ಯಾ ತ್ವಯ್ಯಬ್ಜಿ ಇಂದು ಯಾರ ಸ್ಮತಿಪಟಲದಲ್ಲೂ ಇಲ್ಲ. ಭಾರತದ ಧ್ವಜಕ್ಕೆ ಹೆಮ್ಮೆ, ಭಕ್ತಿಯಿಂದ ಸೆಲ್ಯೂಟ್ ಹೊಡೆಯುವ ಇಲ್ಲಿನ ಪ್ರಜೆಗಳಿಗೆ ಅದರ ಸೃಷ್ಟಿಕರ್ತೆ ಸುರಯ್ಯಿ ತ್ವಯ್ಯಬ್ಜಿ ಕುರಿತು ಅವಜ್ಞೆ ಇದೆ. ಸುರಯ್ಯಿ ಅವರು ಅಮೀರ್ ಅಲಿ, ಲೈಲಾ ಹಸನ್ ಲತೀಫ್ ಅವರ ಮಗಳು. 1919ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದರು. ಇವರ ತಂದೆ ಬದ್ರುದ್ದೀನ್ ತ್ವಯ್ಯಬ್ಜಿ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು, ಸ್ವಾತಂತ್ರ ಹೋರಟಗಾರರಾಗಿದ್ದರು, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ್ದರು. ಇತಿಹಾಸಕಾರರು ಮೊದಲು ಭಾರತದ ಧ್ವಜದಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಚರಕವನ್ನು ಮಾತ್ರ ಬಳಸಿಕೊಳ್ಳಲಾಗಿತ್ತು. ಆದರೆ ಸುರಯ್ಯೆ ತ್ಯ್‌ಯಬ್ಜಿಯವರು ಚರಕದ ಬದಲು ಅಶೋಕ ಚಕ್ರವನ್ನು ಬಳಸಿಕೊಳ್ಳಬೇಕೆಂದು ಪ್ರತಿಪಾದಿಸಿದರು. ಅನೇಕ ಸುತ್ತಿನ ಚರ್ಚೆಗಳ ನಂತರ ಹಟಮಾರಿ ಗಾಂಧೀಜಿ ಸುರಯ್ಯಿ ಅವರ ಮಾತಿಗೆ ಮಣಿಯಬೇಕಾಯಿತು. ಈ ಧ್ವಜಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣಗಳನ್ನು ವಿನ್ಯಾಸಗೊಳಿಸಿದ ಸುರಯ್ಯಾ ಇದು ನಮ್ಮ ದೇಶಪ್ರೇಮದ ಸಂಕೇತ ಎಂದು ಹೇಳಿದ್ದರು ಎಂದು ಬರೆಯುತ್ತಾರೆ. ಗಾಂಧಿಯವರ ಆಯ್ಕೆಯಾದ ಈ ಚಕ್ರವು ಕಾಂಗ್ರೆಸ್‌ನ ಪಕ್ಷಪಾತಿಯಾಗಿ ಸಂಕೇತಿಸುತ್ತದೆ ಎಂದು ವಿರೋಧಿಸಿದ್ದ ಸುರಯ್ಯೆ ಅದರ ಬದಲು ಶಾಂತಿ ಸಂದೇಶವನ್ನು ಹೇಳುವ ಅಶೋಕ ಚಕ್ರದ ಪರ ವಾದಿಸಿದರು. ಮುಸ್ಲಿಂ ಸಮುದಾಯಕ್ಕೆ ನಿಮ್ಮ ದೇಶಪ್ರೇಮವನ್ನು ಸಾಬೀತುಗೊಳಿಸಿ ಎಂದು ಒತ್ತಾಯಿಸುವ ಇಲ್ಲಿನ ಮತಾಂಧರು ಮೊದಲು ಈ ಸುರಯ್ಯಾ ತ್ಯ್‌ಯಬ್ಜಿಯವರ ಮಾನವೀಯತೆಯನ್ನೊಳಗೊಂಡ ದೇಶಪ್ರೇಮದ ಪ್ರಾಥಮಿಕ ಪಾಠವನ್ನು ಕಲಿಯಬೇಕು. ಕಲಾವಿದೆಯಾಗಿದ್ದ ಸುರಯ್ಯಾ ತ್ವಯ್ಯಬ್ಜಿ 1978ರಲ್ಲಿ ಮುಂಬೈಯಲ್ಲಿ ತೀರಿಕೊಂಡರು

► ಬೇಗಂ ಹಮೀದ ಹಬೀಬುಲ್ಲಾ

ಮಹಿಳೆಯರ ಸಬಲೀಕರಣದ ಪರವಾಗಿ ನಿರಂತರ ಹೋರಾಡಿದ ಬೇಗಂ ಹಮೀದ ಹಬೀಬುಲ್ಲಾ ಅವರು ಸ್ವಯಂ ಉದ್ಯೋಗ ಮಹಿಳಾ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದರು. 20, ನವೆಂಬರ್ 1916ರಲ್ಲಿ ಜನಿಸಿದ ಹಮೀದ ಭಾರತ ರಾಜಕಾರಣದ ಎಲ್ಲಾ ಏಳುಬೀಳುಗಳನ್ನು ಕಣ್ಣಾರೆ ಕಂಡವರು, ಅನುಭವಿಸಿದವರು. ವಿಭಜನೆಯ ರಕ್ತಪಾತವನ್ನು ಕಂಡವರು. ನಂತರ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಭಾಗಿಯಾದರು. ಉ.ಪ್ರ. ಸರಕಾರದಲ್ಲಿ ಮಂತ್ರಿಯಾಗಿದ್ದರು, ರಾಜ್ಯಸಭಾ ಸದಸ್ಯೆಯಾಗಿದ್ದರು. ಇವೆಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರ ಸ್ವಾತಂತ್ರ ಮತ್ತು ಹಕ್ಕುಗಳ ಪರವಾದ ಹೋರಾಟಗಾರ್ತಿಯಾಗಿದ್ದರು. ಲಕ್ನೋದ ಐಕಾನ್ ಎಂದೆ ಪ್ರಸಿದ್ಧ್ದರಾಗಿದ್ದ ಹಮೀದ ಅವರು ಅವಧ್‌ನ ಮಹಿಳಾ ಪದವಿ ಕಾಲೇಜ್‌ನ ಸ್ಥಾಪಕರಲ್ಲೊಬ್ಬರು. ಮುಸ್ಲಿಂ ಬಾಲಕಿಯರ ಶಿಕ್ಷಣಕ್ಕಾಗಿ ಸ್ಥಾಪಿತಗೊಂಡ ತಅಲೀಮೇ ನಿಶಾನ್ ಸಂಸ್ಥೆಯ ಅಧ್ಯಕ್ಷೆಯಾಗಿದ್ದರು. ಲಕ್ನೋದ ನಾರಿ ಸೇವಾ ಸಮಿತಿಯ ಪೋಷಕರಾಗಿದ್ದರು, 13, ಮಾರ್ಚ್ 2018 ತಮ್ಮ 102ನೇ ವಯಸ್ಸಿನಲ್ಲಿ ತೀರಿಕೊಂಡರು.

► ಬೇಗಂ ಶರೀಫ ಹಮೀದ್ ಅಲಿ

ಬೇಗಂ ಶರೀಫ ಹಮೀದ್ ಅಲಿ 1907ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸ್ವದೇಶಿ ಚಳವಳಿಯಲ್ಲಿ ಭಾಗವಹಿಸಿದ್ದರು. ಸರೋಜಿನಿ ನಾಯ್ಡು, ಕಮಲಾದೇವಿ ಚಟ್ಟೋಪಾಧ್ಯಾಯ, ರಾಣಿ ರಾಜವಾಡೆ ಜೊತೆಗೂಡಿ ಅಖಿಲ ಭಾರತ ಮಹಿಳಾ ಅಧಿವೇಶನವನ್ನು ಸ್ಥಾಪಿಸಿದರು. ಮಹಿಳೆಯರ ವಿವಾಹ ವಯಸ್ಸನ್ನು ಹೆಚ್ಚಿಸಬೇಕು ಎನ್ನುವ ಸರ್ದ ಕಾಯ್ದೆ ಪರವಾಗಿ ಪ್ರಚಾರ ನಡೆಸಿದರು. ಮುಸ್ಲಿಂ ಮಹಿಳೆಯರ ಮದುವೆಗಳಿಗೂ ಈ ಸರ್ದ ಕಾಯ್ದೆ ಅನ್ವಯವಾಗಬೇಕು ಎನ್ನುವ ಚಳವಳಿ ಪ್ರಾರಂಭಿಸಿದರು. ಈ ಕಾಯ್ದೆಯ ಪರವಾಗಿ ಮುಸ್ಲಿಂ ಮಹಿಳೆಯರ ಸಹಿ ಚಳವಳಿಯನ್ನು ಹಮ್ಮಿಕೊಂಡರು. ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಭೆಗೆ ಮುಸ್ಲಿಂ ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಿ ಮಹಿಳೆ ಮತ್ತು ಪುರುಷರಿಗೆ ಸಮಾನ ಅವಕಾಶ ಕಲ್ಪಿಸಬೇಕೆಂದು ತಮ್ಮ ವಾದ ಮಂಡಿಸಿದರು. 1937ರಲ್ಲಿ ಜೆಕಸ್ಲೊವೇಕಿಯದಲ್ಲಿ ಜರುಗಿದ ಶಾಂತಿ ಮತ್ತು ಸ್ವಾತಂತ್ರಕ್ಕಾಗಿ ಅಂತರ್‌ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ನಲ್ಲಿ ಭಾಗವಹಿಸಿದ್ದರು.

► ಝುಹರ ಅಲಿ ಯಾವರ ಜಂಗ್

1920ರಲ್ಲಿ ಜನಿಸಿದ ಝುಹರ ಅಲಿ ಯಾವರ ಜಂಗ್ ಅವರು ಮಹಿಳಾ ಕೈದಿಗಳ ನೈರ್ಮಲ್ಯ, ಶುಚಿ ಮತ್ತು ಹಕ್ಕುಗಳ ಪರವಾಗಿ ಹೋರಾಡಿದರು. ನಗರ ಪ್ರದೇಶಗಳ ಸ್ಲಂವಾಸಿಗಳ ಸೌಕರ್ಯ ಮತ್ತು ಶುಚಿತ್ವದ ಕುರಿತಾಗಿ ಚಿಂತಿಸಿದರು.

► ಬೇಗಂ ಅನಿಸಾ ಕಿದ್ವಾಯಿ

1906ರಲ್ಲಿ ಜನಿಸಿದ ಬೇಗಂ ಅನಿಸಾ ಕಿದ್ವಾಯಿ ಲೇಖಕಿ, ಹೋರಾಟಗಾರ್ತಿ, ರಾಜಕಾರಣಿಯಾಗಿದ್ದರು. ದೇಶ ವಿಭಜನೆಯ ಸಂದರ್ಭದಲ್ಲಿ ನಿರಾಶ್ರಿತರ ಪುನರ್ವಸತಿಗೆ ನಿರಂತರವಾಗಿ ಶ್ರಮಿಸಿದರು. 1947ರ ಕೋಮು ಗಲಭೆಗಳಲ್ಲಿ ಅವರ ಪತಿ ಶಫಿ ಅಹಮದ್ ಕಿದ್ವಾಯಿ ಕೊಲೆಯಾದರು. ಆದರೆ ಧೃತಿಗೆಡದ ಅನಿಸಾ ಅವರು ಬುರ್ಖಾ ತೊಡುವುದನ್ನು ತ್ಯಜಿಸಿ ದಿಲ್ಲಿಗೆ ಬಂದು ನಿರಾಶ್ರಿತರ ಶಿಬಿರಗಳಲ್ಲಿ ದುಡಿದರು. ಪೂರ್ಣ ಪ್ರಮಾಣದ ಲೇಖಕಿ, ರಾಜಕಾರಣಿಯಾಗಿ ತೊಡಗಿಸಿಕೊಂಡರು.

► ಮುಮ್ತಾಝ್ ಜಹಾನ್ ಹೈದರ್

1907ರಲ್ಲಿ ಜನಿಸಿದ ಮುಮ್ತಾಝ್ ಜಹಾನ್ ಹೈದರ್ ಅವರು ಅಲಿಗಡ ಚಳವಳಿಯ ಆಧಾರಸ್ತಂಭವಾಗಿದ್ದವರು. ಅಲಿಗಡ ಮುಸ್ಲಿಂ ವಿಶ್ವ ವಿದ್ಯಾನಿಲಯದ ಮಹಿಳಾ ಕಾಲೇಜ್ ಅನ್ನು ಮೂವತ್ತು ವಷರ್ಗಳ ಕಾಲ ತಳಮಟ್ಟದಿಂದ ಕಟ್ಟಿ, ಬೆಳೆಸಿದರು. ಇಂದು ದೇಶದ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿರುವ ಈ ಸಂಸ್ಥೆಯನ್ನು ರೂಪಿಸಿದವರು ಮಮ್ತಾಝ್ ಜಹಾನ್. ಈ ಅಲಿಗಡ ಮುಸ್ಲಿಂ ವಿವಿಯ ಮಹಿಳಾ ಕಾಲೇಜ್‌ನಿಂದ ಪದವೀಧರರಾಗಿ ಇಂದು ಉನ್ನತ ಹುದ್ದೆ, ಅಕಾಡಮಿಕ್ ವಲಯಗಳಲ್ಲಿರುವ ನೂರಾರು ಮುಸ್ಲಿಂ ಮಹಿಳೆಯರ ಯಶಸ್ಸಿನ ಹಿಂದೆ ಮಮ್ತಾಝ್ ಜಹಾನ್ ಅವರ ಶ್ರಮವಿದೆ. ಅವರು ನಿರಂತರವಾಗಿ ಕಟ್ಟಿಕೊಟ್ಟ ಶಿಕ್ಷಣವಿದೆ. ಮಾನವೀಯ ಪಾಠಗಳಿವೆ.

► ರಝಿಯಾ ಸಜ್ಜದ

ಫೆಬ್ರವರಿ 1917ರಲ್ಲಿ ಅಜ್ಮೀರ್‌ನಲ್ಲಿ ಜನಿಸಿದ ರಝಿಯಾ ಸಜ್ಜದ ಝಹೀರ್ ಉರ್ದು ಭಾಷೆಯ ಮಹತ್ವದ ಲೇಖಕಿ. ಫೆಬ್ರವರಿ 1903ರಲ್ಲಿ ಜನಿಸಿದ ಫಾತಿಮ ಇಸ್ಮಾಯೀಲ್ ಮಹಿಳೆಯರ ಶಿಕ್ಷಣದ ಪರವಾಗಿ ನಿರಂತರ ಸಂಘಟನೆ ಮಾಡಿದವರು. ಪೋಲಿಯೊ ಕಾಯಿಲೆಯ ವಿರುದ್ಧ ಸತತವಾಗಿ ಸಂಘಟನೆಗಳನ್ನು ರೂಪಿಸಿದರು, ಆಶ್ರಮಗಳನ್ನು ಸ್ಥಾಪಿಸಿದರು. ಜನವರಿ 2017ರಲ್ಲಿ ಭಾರತವು ಸತತವಾಗಿ ಐದು ವರ್ಷಗಳ ಕಾಲ ಪೋಲಿಯೊ ಮುಕ್ತ ರಾಷ್ಟ್ರವೆಂದು ಘೋಷಿಸಿತು. ಅದರ ಹಿಂದೆ ಫಾತಿಮ ಇಸ್ಮಾಯೀಲ್ ಅವರ ಪರಿಶ್ರಮವಿದೆ. ನಿಸ್ವಾರ್ಥ ಸೇವೆಯಿದೆ.

ಈ ಪಟ್ಟಿಯಲ್ಲಿರುವ ಇತರರ ಬದುಕು ಭಿನ್ನವಾಗೇನಿಲ್ಲ. ಇವರೆಲ್ಲ ನಮ್ಮ ರೂಢಿಗತ ಸಮಾಜದ ಸಿದ್ಧ ಮಾದರಿಯೊಳಗೆ ಅಡಕಗೊಳ್ಳುವುದಿಲ್ಲ. ಮೇಲಿನ ಮಾತುಕತೆಯಲ್ಲಿ ಭಾಗವಹಿಸಿದ ಪತ್ರಕರ್ತೆ ಸೀಮಾ ಮುಸ್ತಫಾ ಅವರು ಈ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸಿದ, ಸಂಪ್ರದಾಯವಾದಿಗಳ ಶೋಷಣೆಗೊಳಗಾದ ಮಹಿಳೆಯರ ಪ್ರತಿನಿಧಿಗಳಲ್ಲ, ತಮ್ಮ ಕಾಲಘಟ್ಟದ ಎಲ್ಲ ಬಿಕ್ಕಟ್ಟುಗಳನ್ನು ಎದುರಿಸಿದವರು, ಧರ್ಮದ ಎಲ್ಲ ಕಟ್ಟುಪಾಡುಗಳನ್ನು ಮುರಿದು ಪುರುಷಾಧಿಕಾರಕ್ಕೆ ಸವಾಲೊಡ್ಡಿದವರು. ಇಸ್ಲಾಂ ಅನ್ನು ಅದರ ಸ್ವಾತಂತ್ರದ ಸ್ಫೂರ್ತಿಯಲ್ಲಿ ಪಾಲಿಸಿದವರು ಎಂದು ಹೇಳುತ್ತಾರೆ

ಒಂದು ಕುತೂಹಲದ ವಿಷಯವೆಂದರೆ ಇಲ್ಲಿನ ಬಹುಪಾಲು ಮಹಿಳೆಯರು 1900-1920ರ ಆಸುಪಾಸಿನಲ್ಲಿ ಜನಿಸಿದವರು. ಪ್ರತಿಯೊಬ್ಬರೂ ವೈವಿಧ್ಯವಾದ ಹಿನ್ನೆಲೆಯುಳ್ಳವರು. ಬಹುತೇಕ ಮಹಿಳೆಯರು ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿದವರು. ಆದರೆ ಇವರೆಲ್ಲ ಏಕರೂಪಿ ಸಂಸ್ಕೃತಿಯನ್ನು ವಿರೋಧಿಸಿದರು. ಬಹುತ್ವವನ್ನು ಪ್ರತಿಪಾದಿಸಿದರು ಮತ್ತು ಅದರ ನೆರಳಲ್ಲಿಯೇ ತಮ್ಮ ಬದುಕನ್ನು ರೂಪಿಸಿಕೊಂಡರು. ಮೇಲಿನ ಮುಸ್ಲಿಂ ಮಹಿಳೆಯರು ಧರ್ಮಾತೀತವಾಗಿ ಈ ಸ್ತ್ರೀವಾದದ ಹೊಣೆಗಾರಿಕೆಯನ್ನು ಹೊತ್ತಿದ್ದರು. ಯಾವುದೇ ಘೋಷಣೆಗಳಿಲ್ಲದೆ ತಣ್ಣಗೆ ಸಾಮಾಜಿಕ ಬದ್ಧತೆಯನ್ನು ಪಾಲಿಸುತ್ತ ಎಲ್ಲರಿಗೂ ಸಹನೀಯವಾದ, ಮಾನವೀಯ ಸಮಾಜದ ನಿರ್ಮಾಣಕ್ಕೆ ಜೀವ ಕೊಟ್ಟಿದ್ದಾರೆ. ಫರೀದ ಖಾನ್ ಅವರು ಇವರ ಸಾಧನೆ ಮತ್ತು ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಈಗಾಗಲೇ ಈ ದೇಶದಲ್ಲಿ ಎಲ್ಲರಿಗೂ ಚಿರಪರಿಚಿತರಾಗಬೇಕಿತ್ತು, ಮುಖ್ಯವಾಹಿನಿಯ ಭಾಗವಾಗಬೇಕಿತ್ತು, ಪ್ರತಿಯೊಬ್ಬರಿಗೂ ಇವರು ನೀಡಿದ ಕೊಡುಗೆ, ಮಾಡಿದ ಕೆಲಸದ ಪರಿಚಯವಾಗಿರಬೇಕಿತ್ತು. ಆದರೆ ದುರಂತವೆಂದರೆ ನಾವು ಈ ರೀತಿಯ ಮುಸ್ಲಿಂ ಮಹಿಳೆಯರು 20ನೇ ಶತಮಾನದಲ್ಲಿ ಬದುಕಿದ್ದರು ಎಂದು ಪ್ರದರ್ಶನ ಮಾಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದರೆ ವಿಚಿತ್ರ ಎನ್ನುವ ರೀತಿಯಲ್ಲಿ ಹಠಾತ್ತನೆ ಈ ತಲೆಮಾರು ಅಂತ್ಯಗೊಂಡಂತಿದೆ. ಇವರು ರೂಪಿಸಿದ ಶಿಕ್ಷಣ, ಸಾಮಾಜಿಕ ಕಳಕಳಿ, ಮಾನವೀಯ ಗುಣಗಳು ಮತ್ತು ಸಮಾನತೆ ಎಲ್ಲವೂ ಇವರೊಂದಿಗೆ ಕಣ್ಮರೆಯಾದಂತಿದೆ. ಭಾರತ ಈ ಮೇಲಿನ ತಲೆಮಾರನ್ನು ಮರೆತಿದೆ. ಈ ಮುಸ್ಲಿಂ ಮಹಿಳೆಯರು ರೂಪಿಸಿದ ಸಮಾಜ, ಕಟ್ಟಿಕೊಟ್ಟ ಬದುಕನ್ನು ಮುಂದುವರಿಸಿಕೊಂಡು ಹೋಗಬೇಕಾಗಿದ್ದ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿಲ್ಲ. ಸೋತಿವೆ. ಈ ಕಾರಣಕ್ಕಾಗಿಯೆ 21ನೇ ಶತಮಾನದಲ್ಲಿನ ಈ ದಿನಗಳಲ್ಲಿ ಮುಸ್ಲಿಂ ಮಹಿಳೆ ಅತ್ಯಂತ ಶೋಷಿತಳಾಗಿ ಬದುಕು ಸವೆಸುತ್ತಿದ್ದಾಳೆ. ಪುರುಷಾಧಿಪತ್ಯ, ಧರ್ಮದ ಅಮಾನವೀಯ ಪದ್ಧತಿಗಳ ವಿರುದ್ಧ ಹೋರಾಡಲು ಹೆಣಗುತ್ತಿದ್ದಾಳೆ. ಏಕಾಂಗಿಯಾದ ಆಕೆಗೆ ಈ ಮೂಲಭೂತವಾದದ ಪ್ರವಾಹದ ವಿರುದ್ಧ ಈಜಲು ಕಸುವು ಸಾಲುತ್ತಿಲ್ಲ. ಜಾಮಿಯಾ ಮಿಲಿಯ ಇಸ್ಲಾಮಿಯ ಸಂಸ್ಥೆಯ ಮಾಜಿ ಡೀನ್ ಆಗಿದ್ದ ಫರೀದ್ ಖಾನ್ ಪ್ರತಿಯೊಂದು ಧರ್ಮವೂ ಮಹಿಳೆಯನ್ನು ಶೋಷಿಸುತ್ತದೆ. ಆದರೆ ಇಸ್ಲಾಂ ಮಾತ್ರ ಯಾಕೆ ಈ ಸ್ತ್ರೀವಾದದ ಭಾರವನ್ನು ಹೊರಬೇಕು ಎಂದು ಪ್ರಶ್ನಿಸುತ್ತಾರೆ.

ಆದರೆ ಇತಿಹಾಸದಲ್ಲಿ ಈ ಧೀಮಂತ ಮಹಿಳೆಯರು ಶಿಕ್ಷಣದಲ್ಲಿ, ಸಾಹಿತ್ಯ, ಸಂಸ್ಕೃತಿ ವಲಯದಲ್ಲಿ, ರಾಜಕೀಯದಲ್ಲಿ, ಸ್ತ್ರೀ ಚಳವಳಿಗಳಲ್ಲಿ ಭಿತ್ತಿದ ಸಮಾನತೆ, ಸ್ವಾತಂತ್ರ, ಮಾನವೀಯತೆಯ ಬೀಜ ಈಗ ಮರವಾಗಿದೆ. ಇದು ಎಂದಿಗೂ ಸಾಯುವುದಿಲ್ಲ. ಈ ಮರವನ್ನು ಕಡಿಯಲೂ ಸಾಧ್ಯವಿಲ್ಲ. ಉರ್ದು ಲೇಖಕಿ, ವೈದ್ಯೆ, 20ನೇ ಶತಮಾನದ ಅತ್ಯಂತ ಪ್ರಮುಖ ಸ್ತ್ರೀವಾದಿ, ಪ್ರಗತಿಪರ ಲೇಖಕರ ಒಕ್ಕೂಟದ ಸದಸ್ಯೆಯಾಗಿದ್ದ ರಶೀದ ಜಹಾನ್ ಕುರಿತು ಲೇಖಕಿ ಇಸ್ಮತ್ ಚುಗ್ತಾಯಿ ಅವರು ಆಕೆ ನನ್ನನ್ನು ಹಾಳು ಮಾಡಿದಳು. ಏಕೆಂದರೆ ಆಕೆ ದಿಟ್ಟೆಯಾಗಿದ್ದಳು. ಎಲ್ಲ ಬಗೆಯ ಸಂಗತಿಗಳನ್ನು ಬಹಿರಂಗವಾಗಿ ಮತ್ತು ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದಳು. ನಾನು ಅವಳನ್ನು ಅನುಕರಣೆ ಮಾಡಲು ಬಯಸುತ್ತೇನೆ ಎಂದು ಹೇಳುತ್ತಾರೆ.

ಇಂದು ಮುಸ್ಲಿಂ ಸಮುದಾಯವು ಮತಾಂಧರ ಟೀಕೆಗೆ ಉತ್ತರಿಸಲು ತಾನು ರಾಷ್ಟ್ರೀಯವಾದಿ ಎಂದು ತಮ್ಮ ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ಮೇಲಿನ ಮುಸ್ಲಿಂ ಮಹಿಳೆಯರ ಬದುಕು ಅನುಕರಣೀಯವಾಗಬೇಕು. ಮರಳಿ ಈ ತಲೆಮಾರನ್ನು ರೂಪಿಸಲು ಅನುವಾಗುವಂತಹ ವಾತಾವರಣ ರೂಪಿಸಬೇಕು.

► ಬೇಗಂ ಕುದ್ಸಿಯ ಝೈದಿ

23, ಡಿಸೆಂಬರ್ 1914ರಲ್ಲಿ ಜನಿಸಿದ ಬೇಗಂ ಕುದ್ಸಿಯ ಝೈದಿ ಅವರು ಹಬೀಬ್ ತನ್ವೀರ್ ಜೊತೆ ಸೇರಿ 1955ರಲ್ಲಿ ಹಿಂದುಸ್ತಾನಿ ಥಿಯೇಟರ್ ಅನ್ನು ಸ್ಥಾಪಿಸಿದರು. ಆರಂಭದಲ್ಲಿ ಹವ್ಯಾಸಿ ತಂಡವಾಗಿ ಪ್ರಾರಂಭಗೊಂಡು, ಪಕ್ಕಾ ವೃತ್ತಿಪರ ನಾಟಕ ತಂಡವಾಗಿ ಪ್ರಸಿದ್ಧಿ ಪಡೆದ ಹಿಂದುಸ್ತಾನಿ ಥಿಯೇಟರ್ ಅನ್ನು ಕಟ್ಟಿದರು. ಕಾಳಿದಾಸನ ಶಾಕುಂತಲವನ್ನು ಬ್ರೆಕ್ಟ್‌ನ ಕಕೇಸಿಯನ್ ಚಾಕ್ ಸರ್ಕಲ್‌ವನ್ನು, ಇಸ್ಬೆಲ್‌ನ ಎ ಡಾಲ್ಸ್ ಹೌಸ್, ಬರ್ನಾಡ್ ಶಾನ ಪಿಗ್ಮೇಲಿಯನ್ ನಾಟಕಗಳನ್ನು ಅನುವಾದಿಸಿ ರಂಗಭೂಮಿಗೆ ಅಳವಡಿಸಿ ಪ್ರಯೋಗಿಸಿದರು. ಮಕ್ಕಳಿಗಾಗಿ ಚಾಚ ಚಕ್ಕನ್ ಕೆ ಡ್ರಾಮೆ ನಾಟಕಗಳ ಸರಣಿಯನ್ನು ಪ್ರಯೋಗ ಮಾಡಿದರು. ಆದರೆ ಹಠತ್ತನೆ 1960ರಲ್ಲಿ ತಮ್ಮ 46ನೇ ವಯಸ್ಸಿನಲ್ಲಿ ತೀರಿಕೊಂಡರು.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News