ಆ.. ಕಪ್ಪುಮಳೆಯ ಸುತ್ತಾ...

Update: 2018-09-22 13:43 GMT

ಮಾಲೂರಿನ ಉಪನ್ಯಾಸಕ ಗಂಗಪ್ಪ ತಳವಾರ್‌ರವರ ಬಾಲ್ಯ ಕಾಲದ ನೆನಪಿನ ಒಂದು ಪುಟ್ಟ ದೃಶ್ಯವಿದು. ಹೊಸ ಪೀಳಿಗೆಯ ಬರಹಗಾರರಲ್ಲಿ ಭರವಸೆ ಹುಟ್ಟಿಸುವ ಗ್ರಹಿಕೆ ಹಾಗೂ ಅಭಿವ್ಯಕ್ತಿಯ ವಿಧಾನಗಳನ್ನು ದಕ್ಕಿಸಿಕೊಂಡವರಲ್ಲಿ ಗಂಗಪ್ಪ ಸಹ ಒಬ್ಬರಾಗಿದ್ದಾರೆ. ಕೋಲಾರ ಜಿಲ್ಲೆಯ ಹಳ್ಳಿಯೊಂದರಲ್ಲಿ ಒಂದು ಮಳೆಯ ರಾತ್ರಿ ಘಟಿಸುವ ಸಂಗತಿಗಳ ಸುತ್ತ ಅಣಿನೆರೆಯುವ ವ್ಯಕ್ತಿಗಳು ಮತ್ತು ಪಾತ್ರಗಳಿಗೆ ಇಲ್ಲಿ ಯಾವುದೇ ಹೆಸರುಗಳಿಲ್ಲ. ಆದರೂ ಇಂತಹದ್ದು ನಮ್ಮ ಸುತ್ತ ಸಂಭವಿಸುತ್ತವೆಂಬುದನ್ನು ಓದುಗರು ನಿರಾಕರಿಸಲಾರರು. ಅನುಭವ ಕಥನವೊಂದರ ದೃಶ್ಯವು ವಿಶಿಷ್ಟ ಓದಿನ ಅನುಭವ ನೀಡುವಂತಿದೆ.

ಆ ರಾತ್ರಿ ಜಡಿಮಳೆ...

ದೊಡ್ಡಮ್ಮನ ಮನೆಗೆ, ನಮ್ಮ ಮನೆಗೆ ಒಂದೇ ಅಡ್ಡ ಗೋಡೆ.. ಎರಡು ಮನೆಗಳಲ್ಲಿ ಏನೇ ಜಗಳ, ಮಾತು ನಡೆಯಲಿ ಆ ಗೋಡೆಗೆ ಕಿವಿಗಳಿತ್ತು..ಬಹುಶಃ ನಾನು ಆರನೇ ಕ್ಲಾಸು.. ದೊಡ್ಡಮ್ಮನ ಮನೇಲಿ ರೇಷ್ಮೆ ಸಾಕಣೆ,ಎಮ್ಮೆ,ಕರು ಇದ್ದರಿಂದ ಆ ಕಾಲಕ್ಕೆ ಈ ಮನೇಲಿ ಒಲೆಯಲ್ಲಿ ಕಿಚ್ಚು ಆರುತ್ತಿರಲಿಲ್ಲ.. ಆ ರಾತ್ರಿ ಅಪ್ಪ ನನ್ನ ಅಮ್ಮನ ಮೇಲೆ ಜಗಳ ತೆಗೆದು ಇಟ್ಟೆಸರಿನ ಹೊಟ್ಟೆಗೆ ತಣ್ಣೀರಬಟ್ಟೆ ಸುತ್ತಿದ್ದ..

ಅವ್ವ, ಅಕ್ಕಂದಿರಿಗೆ ಅಜ್ಜಿ ಪುಟ್ಟಮ್ಮನ ಗುಡಿಸಲ ಜೋಪಡಿಯೇ ಆಸರೆ.. ಆ.. ಗುಡಿಸಲಲ್ಲಿ ಮೈಯ್ಯ ಬಲವನ್ನೆಲ್ಲಾ ಮೂಟೆಯಂತೆ ಮಡಚಿದರೆ ಮಾತ್ರ ಮಲಗಲು ಜಾಗ. ಇಲ್ಲವೆಂದರೆ ಬೆಳಕರಿಯೊವರೆಗೂ ಶಿವರಾತ್ರಿ ಜಾಗರಣೆ. ಅಪ್ಪ ಜಮದಗ್ನಿಯಂತಹ ಕಂಬಳಿ ರಗ್ಗಿನಲ್ಲಿ ಕುಡುಗೋಲೋ, ದೊಣ್ಣೆಯೋ ಅವಿತಿರುತಿತ್ತು..ಆ.. ರಾತ್ರಿ ಜಡಿಮಳೆಯಲ್ಲಿ ಬೆನ್ನಿಗೆ ಗೊಂಗಡಿ ಸಿಕ್ಕಿಸಿಕೊಂಡು ಕೇರಿ ಸಂದು ಗೊಂದುಗಳಿಡಿದು ಅವ್ವನನ್ನು ಹುಡುಕಲು ಮನೆಮನೆ ಜಪ್ತಿ ಕಾರ್ಯದಲ್ಲಿ ತೊಡಗಿದ್ದ. ಈ ರಾತ್ರಿಗೆ ಅವ್ವನನ್ನು ಖೂನಿ ಮಾಡುವನೇನೋ!? ಎಂಬ ಭಯದಿಂದ ನಡುಗುತ್ತಿದ್ದೆ. ಅಪ್ಪ ಬಾಡು ತಂದ ದಿನವೆಲ್ಲಾ ಮನೆ ರಣರಂಗದ ವೇದಿಕೆಯಾಗಿ ರೂಪಗೊಳ್ಳುತ್ತಿತ್ತು... ಅಪ್ಪ ಬೇಕಂತಲೇ ಜಗಳ ಕಾಯುತ್ತಿದ್ದ.. ಅವ್ವ ದೊಡ್ಡಮ್ಮನಿಗೂ ಮಾತು ನಿಂತಿತ್ತು... ಆ ರಾತ್ರಿ ಅವ್ವ ಸೊಸೈಟಿಯಲ್ಲಿ ಕೊಟ್ಟಿದ್ದ ಥೇಟ್ ಖಾದಿ ರಗ್ಗಿನಂತಿದ್ದ ಸೀರೆಯನ್ನು ಕೊಟ್ಟು ‘ಈ ರಾತ್ರಿಗೆ ಅವಧೂತ ಕೃಷ್ಣಪ್ಪನ ಮಠದಲ್ಲಿ ಬೆಳಗಾಗೋಗಂಟ ಹಂಗೆ ಕಣ್ಮುಚ್ಚುಕೋ, ಮಸೀದಿಲಿ ಅಲ್ಲಾ ಕೂಗೋ ಹೊತ್ತಿಗೆ ಎಬ್ಬಿಸ್ತಿನಿ ಅಂತೇಳಿ ಪುಟ್ಟಜ್ಜಿ ಮನೆ ಕಡೆ ತಿರುಗಿದಳು. ನಾನು ಮಠದ ಕಡೆ ಹೆಜ್ಜೆ ಹಾಕಿದೆ..

ಆ ಮಠ ದಿಕ್ಕುದೆಸೆ ಇಲ್ಲದ ಪಾಪಿ ಪರದೇಸಿಗಳು ಮಲಗೋ ತಾಣವಾಗಿತ್ತು.. ನಾನು ಅವ್ವನ ಬೆಚ್ಚನೆಯ ಸೀರೆ ಮೈಗೆ ಸುತ್ತಿ ಮೂಲೆ ಪಕ್ಕ ಒರಗಿದೆ..ಅಲ್ಲಲ್ಲಿ ಜನ ಅನಾಥರಂತೆ ಮಲಗಿದ್ದರು.ಎಲ್ಲರೂ ಕುಡಿದಿದ್ದವರಾಗಿದ್ದರು.. ಆಕಾಶದಲ್ಲಿ ಗುಡುಗು, ಮಿಂಚುಗಳ ಸದ್ದು ನನ್ನ ಎದೆ ಜಗ್ಗಿಸುತ್ತಿತ್ತು..ಮಠದಲ್ಲಿ ಇರುವವರೆಲ್ಲಾ ಅಲೆಮಾರಿಗಳು, ತಂಬೂರಿ ದಾಸಯ್ಯಗಳು, ಬೂರು ಬೂರು ಗಂಗಶಿರಸ್ಸು ಎತ್ತುವಂಥವರು. ಕೊಡೆ, ಟ್ರಂಕು ರಿಪೇರಿದಾರರು, ಊರ ಮನೆಗಳಲ್ಲಿ ಬೇಸತ್ತ ಮುದಿ ವಯಸ್ಸಿನವರು, ಶಾಸ್ತ್ರ ಹೇಳುವಂಥವರು. ಗಂಗೆತ್ತು ಆಡಿಸುವವರು, ಹೀಗೆ ತರತರದ ವೃತ್ತಿ ಬದುಕಿನ ಕಾಯಕಿಗಳು. ಈ ಮಠದಲ್ಲಿ ಮಧ್ಯವಯಸ್ಸಿನ ಹೆಂಗಸರು, ಮುದುಕ, ಮುದುಕಿಯರು, ಬೆನ್ನ ಜೋಳಿಗೆಗೆ ಮೆತ್ತಿಕೊಂಡ ಎಳೆಮಕ್ಕಳು ಕೋತಿಮರಿಗಳಂತೆ ಅವರವರ ಅಮ್ಮಂದಿರ ಚರ್ಮಕ್ಕಂಟಿ ನಿದ್ದೆಗೆ ಜಾರಿದ್ದರು. ನಾನೂ ಅವ್ವನ ಸೀರೆಯನ್ನು ಮುಖಕ್ಕೆ ಸುತ್ತಿ ಮಲಗಿದೆ...

ಆ ಮಠಕ್ಕೆ ಕರೆಂಟು ಕಟ್ಟಾಗಿತ್ತು. ಸುತ್ತಲೂ ಗವಗತ್ತಲು..ಮುದುಕನೊಬ್ಬ ಮೂಲೆಕಡೆಯಿಂದ ಯಾವುದೋ ತತ್ವಪದಗಳನ್ನ ಚೆಲ್ಲುತ್ತಿದ್ದರೆ ಮತ್ತೊಂದು ಮೂಲೆಯಿಂದ ವಿರೋಧ ವ್ಯಕ್ತವಾಗುತ್ತಿತ್ತು... ತಂಬೂರಿಗಳು ಹೆಂಚಿನ ಮರದ ದಿಂಬುಗಳಲ್ಲಿ ನಿದ್ದೆಗಿಳಿದಿದ್ದವು... ಹನಿಮಳೆ ಸಿನುಕುಗಳು ಹೆಂಚಿನ ಮೇಲೆ ಟಪ್ ಟಪ್ ಹಾಡು..

ನಾನು ಸೀರೆಗೆ ಹರಿದಿದ್ದ ಒಂದು ಕಿಂಡಿಯಿಂದ ಭಯದಿಂದ ಕಣ್ಣಾಡಿಸಿದೆ..ರಾತ್ರಿಹುಳಗಳ ವಿಷಾದಗೀತೆ ಮೊಳಗುತಿತ್ತು.. ಎದ್ದು ಕೂತರೆ ಯಾರಾದರೂ ಗದರುವರೆಂಬ ಭಯ ಒಂದ್ಕಡೆ, ಅಪ್ಪನ ಕೆಂಡದ ಕಣ್ಣುಗಳು ಮತ್ತೊಂದು ಕಡೆ.. ಎದೆಯಲ್ಲಿ ಬಡಿತ ಹೆಚ್ಚಾಗುತ್ತಿತ್ತು..ಯಾಕೋ ಆ ರಾತ್ರಿ ರೆಪ್ಪೆಗಳು ಕಣ್ಣಿಗೆ ಅಂಟದೆ ತಕರಾರು ಮಾಡುತಿತ್ತು. ಸುತ್ತಲೂ ಕಣ್ಣಾಡಿಸಿದೆ,,ಸೋರೆ ಹೂವಿನಂತೆ ಕಾಣುವ ಗಡ್ಡದ ಮುಖಗಳು. ಅವರ ಮೂಗಿನ ಕೊಳವೆಗಳಲ್ಲಿ ಇರುವೆ,ನೊಣಗಳು ನಿರ್ಭಯವಾಗಿ ಓಡಾಡುತ್ತಿದ್ದವು.ಅವರ ನಾಲಿಗೆಗಳಿಂದ ಜೊಲ್ಲು ಉಕ್ಕುತ್ತಿತ್ತು... ಆಗ ಸಮರಾತ್ರಿಯಲ್ಲಿ ರಗ್ಗು ಹೊದ್ದುಕೊಂಡ ಒಂದು ದೈತ್ಯದೇಹ ಮಠದ ಒಳಪ್ರವೇಶಿಸಿತು. ಆತ ಯುವಕನಾಗಿದ್ದ. ಮತ್ತೆ ನನ್ನ ಎದೆಯಲ್ಲಿ ಭಯದ ಕರಾಳತೆ ನೂರ್ಮಡಿಸಿತು. ಒಂದು ಕೈಯಲ್ಲಿ ಕುಡುಗೋಲು,ಮತ್ತೊಂದು ಕೈಯಲ್ಲಿ ಹಳೇ ಬ್ಯಾಟರಿ, ಹೆಗಲಲ್ಲಿ ಕಪ್ಪುಕೊಡೆ ಹಿಡಿದು ಸುತ್ತಲೂ ಕಣ್ಣಾಡಿಸುತ್ತಿರುವಂತೆ ಅನಿಸಿತು. ಬಹುಶಃ ಅಪ್ಪನಿರಬಹುದಾ? ಅವ್ವನನ್ನು ಹುಡುಕಿ ಬಂದಿರಬಹುದಾ; ಆಕಸ್ಮಾತ್ ನನ್ನನ್ನು ಗುರುತು ಹಿಡಿದು ಸಾಯಿಸಿಬಿಟ್ರೆ? ಅಯ್ಯೋ ದೇವರೆ!!! ಉಸಿರೆಲ್ಲಾ ಕೈಗೆ ಹಿಡಿದು, ಗಟ್ಟಿಯಾಗಿ ಕಣ್ಮುಚ್ಚಿಕೊಂಡೆ.

ಏನೋ ಗುಜುಗುಜು ಸದ್ದು..

ಇಂವ ಅಪ್ಪನಲ್ಲವೆಂಬುದು ಖಾತ್ರಿಯಾಯಿತು... ಕಣ್ಬಿಟ್ಟೆ. ಆತನ ಕಣ್ಣುಗಳು ಬೆಕ್ಕಿನ ಕಣ್ಣುಗಳಂತಿದ್ದವು..ಈ ಮಠವನ್ನು ನೋಡಿಕೊಳ್ಳುತ್ತಿದ್ದವನ ಮುಖ ಇದು. ನನಗೆ ಪರಿಚಿತ ಮುಖವೇ.. ಈ ಮಠವನ್ನು ಕಟ್ಟಲು ಇವರ ಅಪ್ಪ ಈ ಜಾಗವನ್ನು ಕೊಟ್ಟಿದ್ದನ್ನ ಕೇಳಿದ್ದೆ.. ಆಗತಾನೇ ಕಬ್ಬಿನ ಬಂಡಿಯನ್ನು ಮಠದಂಚಿಗೆ ನಿಲ್ಲಿಸಿದ್ದ..ಮುಂಜಾನೆಗೆ ನಮ್ಮೂರಿಂದ ಹದಿನೈದು ಕಬ್ಬಿನಬಂಡಿಗಳು ಬೆನ್ನಘಟ್ಟ (ದಾದಿ ನಾಯಕನದೊಡ್ಡಿ) ಪರಿಸೆಗೆ ಹೋಗಲು ಗುಂಡುತೋಪಿನ ಕಡೆ ಸಾಲಾಗಿ ನಿಲ್ಲಿಸಿದ್ದನ್ನ ಈಗಾಗಲೇ ನೋಡಿದ್ದೆ.. ನಾನು ಹೊದ್ದಿದ್ದ ಸೀರೆ ಸರಿಸಿ ಕಣ್ಣು ತೆರೆದು ನೋಡಿದೆ..

ಅಲ್ಲಿ ಮಲಗಿದ್ದ ಮದ್ಯ ವಯಸ್ಸಿನ ಹೆಂಗಸೊಬ್ಬಳನ್ನು ಆತ ಮೆಲ್ಲಗೆ ಎಬ್ಬಿಸುತ್ತಿದ್ದ.. ಆಕೆ ಆತನಿಗೆ ಸಹಕರಿಸದೆ ಬೋರಲು ಮಲಗಿಕೊಂಡಳು..ಆತ ಆಕೆಯ ಪಕ್ಕ ಕೂತು ಕೈಯಿಡಿದು ಎಳೆದಾಡುತ್ತಿದ್ದರೆ, ಮಲಗಿದ್ದವರಿಗೆ ಎಚ್ಚರ ಇದ್ದರೂ ಭಯದಿಂದಲೋ ಏನೋ ತಿಳಿಯದಂತೆ ವರ್ತಿಸಿದಂತಿತ್ತು.. ಆಕೆ ಕುಡಿದ ನಿಶೆಯಲ್ಲಿದ್ದಳು. ಆಕೆಯ ಉಡುಪು ಚೆಲ್ಲಾಪಿಲ್ಲಿಯಾಗಿದ್ದವು. ಆ ಜಾಗಕ್ಕೆ ಮತ್ತೊಬ್ಬ ಗಿರಾಕಿ ಬಂದು ಇಬ್ಬರೂ ಒಟ್ಟುಗೂಡಿ ಅನಾಮತ್ತಾಗಿ ಆ ಹೆಂಗಸನ್ನು ಹೆಗಲಿಗೇರಿಸಿಕೊಂಡರು. ಹೆಜ್ಜೆಗಳನ್ನು ನೆಲಕ್ಕೆ ಊರದಂತೆ ಬೆಕ್ಕಿನ ನಡಿಗೆಯಂತೆ ಮಠದ ಹಿಂಬದಿಯ ಹುಲ್ಲಿನ ವಾಮಕಡೆ ಹೊತ್ತು ಹೋದರು.. ಯಾಕೋ ಎದೆಯಲ್ಲಿ ಭೀತಿ ಹೆಚ್ಚಾಯಿತು..

ಗುಡುಗು, ಮಿಂಚುಗಳು ಏಕವಾಗಿ ನನ್ನ ಎದೆ ಮೇಲೆ ಬಿದ್ದಂಗಾಯ್ತು.. ಕಟ್ಟಿರುವೆ, ತಿಗಣೆಗಳು ನನ್ನ ಮೈಮೇಲೆ ಭೀಕರ ಬೇಟೆಗೆ ನಿಂತಿದ್ದವು.. ಕಣ್ಣಮಬ್ಬಿನಲ್ಲಿ ಆಕೆಯ ಅಳುವಿನ ರೋದನೆ.. ಅದು ದೆವ್ವದ ರಾಗವಾ ಎಂದು ಮನ ತವಕಿಸುತ್ತಿತ್ತು.. ಆ ಹೆಣ್ಣು ಬೇಟೆಗಾರರ ಸುಳಿವು ಕಾಣಿಸಲಿಲ್ಲ... ಕೆಲ ಹೊತ್ತಿನ ನಂತರ ಆ ಹೆಂಗಸು ತಾನು ಮಲಗಿದ್ದ ರಗ್ಗಿನ ಕಡೆ ದೇಕುತ್ತಾ.. ತೆವಳುತ್ತಾ ತನ್ನ ಜಾಗ ಸೇರಿದಳು... ಕತ್ತಲನ್ನು ಬೆಳಕು ಸಣ್ಣಗೆ ನುಂಗುತ್ತಿತ್ತು.. ಮಳೆ ಸುರಿಯತ್ತಲೇ ಇತ್ತು..

Writer - ಗಂಗಪ್ಪ ತಳವಾರ್

contributor

Editor - ಗಂಗಪ್ಪ ತಳವಾರ್

contributor

Similar News